ಮಂಡ್ಯ: ಸ್ನೇಹದ ಹೆಸರಿನಲ್ಲಿ ನಂಬಿಕೆ ದ್ರೋಹ ಎಸಗಿದ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಹೆತ್ತ ಮಕ್ಕಳನ್ನು ಹಾಗೂ ಕಟ್ಟಿ ಕೊಂಡವರನ್ನು ಬಿಟ್ಟು, ಗಂಡನ ಸ್ನೇಹಿತನ ಜೊತೆಯೇ ಮಹಿಳೆಯೊಬ್ಬರು ಪರಾರಿಯಾಗಿರುವ ಆಘಾತಕಾರಿ ಘಟನೆ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪವಿತ್ರ ಮತ್ತು ಯೇಸುದಾಸ್ ಓಡಿಹೋದ ವಿವಾಹಿತ ಜೋಡಿಗಳಾಗಿದ್ದಾರೆ. ವಿಶೇಷವೆಂದರೆ, ಓಡಿಹೋದ ಇಬ್ಬರಿಗೂ ಈಗಾಗಲೇ ಮದುವೆಯಾಗಿದ್ದು, ತಲಾ ಇಬ್ಬರು ಮಕ್ಕಳಿದ್ದಾರೆ.
ಫೋಟೋ ಕಳುಹಿಸಿ ಶಾಕ್ ನೀಡಿದ ಜೋಡಿ!
ಮನೆ ಬಿಟ್ಟು ನಾಪತ್ತೆಯಾಗಿದ್ದ ಇಬ್ಬರು ಪ್ರೇಮಿಗಳು, ಇದೀಗ ತಾವಿಬ್ಬರೂ ಮದುವೆಯಾಗಿರುವ ಫೋಟೋವನ್ನು ಕುಟುಂಬಸ್ಥರಿಗೆ ವಾಟ್ಸಾಪ್ ಮೂಲಕ ಕಳುಹಿಸಿ ಭಾರಿ ಶಾಕ್ ನೀಡಿದ್ದಾರೆ.
ಮಕ್ಕಳೊಂದಿಗೆ ವಿಡಿಯೋ ಮಾಡಿ ಕಣ್ಣೀರು ಹಾಕಿದ ದಂಪತಿ
ತಮ್ಮವರನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಓಡಿಹೋದವಳ ಗಂಡ ಮತ್ತು ಓಡಿಹೋದವನ ಹೆಂಡತಿ, ಮಕ್ಕಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. “ಮಕ್ಕಳ ಮುಖ ನೋಡಿಯಾದರೂ ವಾಪಸ್ ಬನ್ನಿ” ಎಂದು ಅಳಲು ತೋಡಿಕೊಳ್ಳುತ್ತಾ ಜೋಡಿಗಳಿಗೆ ಮನವಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಕುಟುಂಬಸ್ಥರು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ








