ನ್ಯೂಯಾರ್ಕ್:ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಪಿಜ್ಜಾ ಬ್ರ್ಯಾಂಡ್‌ಗಳಲ್ಲಿ ಒಂದಾದ ‘ಪಿಜ್ಜಾ ಹಟ್’ (Pizza Hut) ಅನ್ನು ಅದರ ಪ್ರಸ್ತುತ ಮಾರುಕಟ್ಟೆ ಮಾಲೀಕರಾದ ‘ಯಮ್ ಬ್ರ್ಯಾಂಡ್ಸ್’ (Yum! Brands) ಮಾರಾಟ ಮಾಡಲು ನಿರ್ಧರಿಸಿದೆ. ಕಳೆದ ಕೆಲವು ವರ್ಷಗಳಿಂದ ತೀವ್ರ ಪೈಪೋಟಿ ಹಾಗೂ ನಷ್ಟದ ಹಾದಿಯಲ್ಲಿದ್ದ ಈ ರೆಸ್ಟೋರೆಂಟ್ ಸರಣಿಯನ್ನು ಒಟ್ಟು 2.7 ಬಿಲಿಯನ್ ಡಾಲರ್ (ಸುಮಾರು 22,500 ಕೋಟಿ ರೂಪಾಯಿ) ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಕೆಎಫ್‌ಸಿ (KFC) ಮತ್ತು ಟಾಕೋ ಬೆಲ್ (Taco Bell) ಬ್ರ್ಯಾಂಡ್‌ಗಳನ್ನೂ ಹೊಂದಿರುವ ‘ಯಮ್ ಬ್ರ್ಯಾಂಡ್ಸ್’, ಇನ್ಮುಂದೆ ಹೆಚ್ಚು ಲಾಭದಾಯಕವಾಗಿರುವ ತನ್ನ ಇತರ ಬ್ರ್ಯಾಂಡ್‌ಗಳ ಮೇಲೆ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದೆ.
ಈ ಭಾರಿ ಜಾಗತಿಕ ಒಪ್ಪಂದವನ್ನು ಎರಡು ಪ್ರತ್ಯೇಕ ಕಂಪನಿಗಳೊಂದಿಗೆ ಮಾಡಿಕೊಳ್ಳಲಾಗಿದೆ:
ಚೀನಾ ಹೊರತುಪಡಿಸಿ ಜಾಗತಿಕ ಮಾರುಕಟ್ಟೆ: ಚೀನಾವನ್ನು ಹೊರತುಪಡಿಸಿ ಅಮೆರಿಕ ಮತ್ತು ಭಾರತ ಸೇರಿದಂತೆ ಜಗತ್ತಿನ ಇತರೆಲ್ಲಾ ದೇಶಗಳ ಪಿಜ್ಜಾ ಹಟ್ ವ್ಯವಹಾರವನ್ನು ಖಾಸಗಿ ಇಕ್ವಿಟಿ ಸಂಸ್ಥೆಯಾದ ‘ಲಾಂಗ್ರೇಂಜ್ ಕ್ಯಾಪಿಟಲ್’ (LongRange Capital) ಸುಮಾರು 1.5 ಬಿಲಿಯನ್ ಡಾಲರ್‌ಗೆ ಖರೀದಿಸುತ್ತಿದೆ.
ಚೀನಾ ಮಾರುಕಟ್ಟೆ: ಪಿಜ್ಜಾ ಹಟ್‌ಗೆ ಭಾರಿ ಬೇಡಿಕೆಯಿರುವ ಚೀನಾದ ಮಾರುಕಟ್ಟೆಯ ವ್ಯವಹಾರವನ್ನು ‘ಯಮ್ ಚೀನಾ ಹೋಲ್ಡಿಂಗ್ಸ್’ (Yum China) ಸಂಸ್ಥೆಯು 1.2 ಬಿಲಿಯನ್ ಡಾಲರ್ ನೀಡಿ ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳುತ್ತಿದೆ.
68 ವರ್ಷಗಳ ಸುದೀರ್ಘ ಇತಿಹಾಸವಿರುವ ಪಿಜ್ಜಾ ಹಟ್ ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಫಲವಾಗಿತ್ತು.
ಉಬರ್ ಈಟ್ಸ್, ಡೋರ್‌ಡ್ಯಾಶ್‌ನಂತಹ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳ ಹಾವಳಿ ಹಾಗೂ ಡೊಮಿನೋಸ್‌ನಂತಹ ಪ್ರಬಲ ಪೈಪೋಟಿ ಸಂಸ್ಥೆಗಳ ಎದುರು ಪಿಜ್ಜಾ ಹಟ್ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಾ ಬಂದಿತ್ತು. ಸತತ 10 ತ್ರೈಮಾಸಿಕಗಳಿಂದ ಇದರ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದರಿಂದ, ಇತ್ತೀಚೆಗಷ್ಟೇ ಅಮೆರಿಕದಲ್ಲಿನ ಸುಮಾರು 250 ನಷ್ಟದಲ್ಲಿದ್ದ ಔಟ್‌ಲೆಟ್‌ಗಳನ್ನು ಮುಚ್ಚಲಾಗಿತ್ತು.
ಜಾಗತಿಕವಾಗಿ ಮಾಲೀಕತ್ವ ಬದಲಾದರೂ, ಭಾರತದಲ್ಲಿ ಪಿಜ್ಜಾ ಹಟ್ ಪ್ರಿಯರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಭಾರತದಲ್ಲಿ ಇದರ ಫ್ರಾಂಚೈಸಿ ಹೊಂದಿರುವ ‘ದೇವಯಾನಿ ಇಂಟರ್ನ್ಯಾಷನಲ್’ (Devyani International) ಸಂಸ್ಥೆಯೇ ಎಂದಿನಂತೆ ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಆದರೆ, ಇನ್ಮುಂದೆ ಅವರು ಹೊಸ ಮಾಲೀಕರಾದ ‘ಲಾಂಗ್ರೇಂಜ್ ಕ್ಯಾಪಿಟಲ್’ ಅಡಿಯಲ್ಲಿ ವರದಿ ಒಪ್ಪಿಸಬೇಕಾಗುತ್ತದೆ.
ಈ ಸಂಪೂರ್ಣ ಮಾರಾಟ ಪ್ರಕ್ರಿಯೆಯು 2026ರ ಮೂರನೇ ತ್ರೈಮಾಸಿಕದೊಳಗೆ (ಜುಲೈ-ಸೆಪ್ಟೆಂಬರ್) ಪೂರ್ಣಗೊಳ್ಳುವ ನಿರೀಕ್ಷೆಯಿದೆ.








