ಇತ್ತೀಚಿನ ದಿನಗಳಲ್ಲಿ ನಾವು ಶಾಪಿಂಗ್ ಮಾಲ್ ಗೇ ಹೋಗಲಿ ಅಥವಾ ಆನ್ ಲೈನ್ ನಲ್ಲಿ ಬಟ್ಟೆ ಖರೀದಿಸಲಿ, ಮೊದಲು ನೋಡುವುದೇ ಸೈಜ್ (Size). ನಮಗೆ ಸರಿಹೊಂದುವ ಸೈಜ್ ಹುಡುಕಿ ಬಟ್ಟೆ ಖರೀದಿಸುತ್ತೇವೆ. ಆದರೆ, ಈ ಸೈಜಿಂಗ್ ಪದ್ಧತಿ ಇಲ್ಲದಿದ್ದಾಗ ಜನರು ಬಟ್ಟೆಗಳನ್ನು ಹೇಗೆ ಖರೀದಿಸುತ್ತಿದ್ದರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸುಮಾರು 200 ವರ್ಷಗಳ ಹಿಂದಿನವರೆಗೆ ಜಗತ್ತಿನಲ್ಲಿ ‘ರೆಡಿಮೇಡ್’ ಬಟ್ಟೆಗಳು ಎಂಬುದೇ ಇರಲಿಲ್ಲ. ಆ ದಿನಗಳಲ್ಲಿ ಬಟ್ಟೆ ಬೇಕೆಂದರೆ ಕೇವಲ ಎರಡೇ ಮಾರ್ಗಗಳಿದ್ದವು.
200 ವರ್ಷಗಳ ಹಿಂದೆ ಹೇಗಿತ್ತು ಪರಿಸ್ಥಿತಿ?
ಧನವಂತರು ನೇರವಾಗಿ ದರ್ಜಿ (ಟೈಲರ್) ಬಳಿ ಹೋಗುತ್ತಿದ್ದರು. ಟೈಲರ್ ಅವರ ದೇಹದ ಪ್ರತಿಯೊಂದು ಭಾಗವನ್ನು ಇಂಚು ಇಂಚಾಗಿ ಅಳೆದು, ಅವರಿಗೆ ಸರಿಯಾಗಿ ಹೊಂದುವ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಇನ್ನು ಅಷ್ಟಾಗಿ ಶ್ರೀಮಂತರಲ್ಲದವರ ಮನೆಗಳಲ್ಲಿ, ಮಹಿಳೆಯರೇ ಸ್ವತಃ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಸಣ್ಣ ಮಕ್ಕಳಿಗಾಗಿ ಹಳೆಯ ಜೀನ್ಸ್ ಅಥವಾ ದೊಡ್ಡವರ ಸಡಿಲವಾದ ಬಟ್ಟೆಗಳನ್ನು ಕತ್ತರಿಸಿ, ಮಕ್ಕಳಿಗೆ ಬೇಕಾದ ಅಳತೆಯಲ್ಲಿ ಮರು-ರೂಪಿಸುತ್ತಿದ್ದರು. ಅಂದರೆ, ಅಂದಿನ ಕಾಲದಲ್ಲಿ ಬಟ್ಟೆಗಳು ಶ್ರೀಮಂತರದ್ದಾಗಿರಲಿ ಅಥವಾ ಬಡವರದ್ದಾಗಿರಲಿ, ಅವು ಅವರವರ ದೇಹದ ಅಳತೆಗೆ ತಕ್ಕಂತೆ ಮಾತ್ರ ತಯಾರಾಗುತ್ತಿದ್ದವು. ‘S, M, L’ ಎಂಬ ಯಾವುದೇ ಸೈಜ್ಗಳು ಅಸ್ತಿತ್ವದಲ್ಲಿರಲಿಲ್ಲ.
ಯುದ್ಧಭೂಮಿಯಲ್ಲಿ ಹುಟ್ಟಿದ ಸೈಜ್ ಪದ್ಧತಿ!
ನಮ್ಮ ಬಟ್ಟೆಗಳ ಮೇಲಿರುವ ಈ S (ಸ್ಮಾಲ್), M (ಮೀಡಿಯಂ), L (ಲಾರ್ಜ್) ಸೈಜ್ಗಳ ವಿಧಾನವು ಯಾವುದೇ ಫ್ಯಾಶನ್ ಶೋ ಅಥವಾ ದೊಡ್ಡ ಬ್ರಾಂಡ್ಗಳಿಂದ ಬಂದಿದ್ದಲ್ಲ. ಬದಲಿಗೆ ಇದು ಯುದ್ಧಭೂಮಿಯಿಂದ ಹುಟ್ಟಿಕೊಂಡಿದ್ದಾಗಿದೆ.
1800ರ ದಶಕದಲ್ಲಿ ನೆಪೋಲಿಯನ್ ಯುದ್ಧಗಳು ಮತ್ತು ಅಮೆರಿಕನ್ ಅಂತರ್ಯುದ್ಧದಂತಹ ಭೀಕರ ಯುದ್ಧಗಳು ನಡೆಯುತ್ತಿದ್ದಾಗ, ಸರ್ಕಾರಗಳಿಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಲಕ್ಷಾಂತರ ಸೈನಿಕರಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಒಂದೇ ರೀತಿಯ ಯೂನಿಫಾರಂಗಳನ್ನು ತಲುಪಿಸಬೇಕಾಗಿತ್ತು. ಪ್ರತಿಯೊಬ್ಬ ಸೈನಿಕನನ್ನು ಟೈಲರ್ ಬಳಿ ಕಳುಹಿಸಿ ಅಳತೆ ತೆಗೆದುಕೊಳ್ಳುವುದು ಅಸಾಧ್ಯದ ಮಾತಾಗಿತ್ತು.
ಪರಿಹಾರ ಸಿಕ್ಕಿದ್ದು ಹೀಗೆ: ಬಟ್ಟೆ ತಯಾರಕರು ಸಾವಿರಾರು ಸೈನಿಕರ ದೇಹದ ಅಳತೆಗಳನ್ನು ಸಂಗ್ರಹಿಸಿ ಪರಿಶೀಲಿಸಿದರು. ಈ ವೇಳೆ ಪುರುಷರ ಎದೆಯ (Chest) ಅಗಲದಲ್ಲಿ ಒಂದು ನಿರ್ದಿಷ್ಟವಾದ ಸರಾಸರಿ ಅಳತೆ (Pattern) ಇರುವುದನ್ನು ಅವರು ಗಮನಿಸಿದರು. ಇದರ ಆಧಾರದ ಮೇಲೆ, ಸೈನಿಕರ ಯೂನಿಫಾರಂಗಳಿಗಾಗಿ ಮೊದಲ ಬಾರಿಗೆ ಸ್ಮಾಲ್, ಮೀಡಿಯಂ, ಲಾರ್ಜ್ ಎಂಬ ಪ್ರಮಾಣಿತ (Standard) ಸೈಜ್ಗಳನ್ನು ವರ್ಗೀಕರಿಸಲಾಯಿತು. ಈ ಪ್ರಯೋಗ ಯಶಸ್ವಿಯಾಗಿದ್ದೇ ರೆಡಿಮೇಡ್ ಬಟ್ಟೆ ಉದ್ಯಮಕ್ಕೆ ಬಲವಾದ ಮುನ್ನುಡಿ ಬರೆಯಿತು.
ಮಹಿಳೆಯರ ಸೈಜ್ ಗುರುತಿಸುವಿಕೆ ಮತ್ತು ಆಧುನಿಕ ರೂಪ
ಪುರುಷರ ಸೈಜ್ ಪದ್ಧತಿ ಯಶಸ್ವಿಯಾದ ನಂತರ, 1939 ರಲ್ಲಿ ಅಮೆರಿಕ ಸರ್ಕಾರವು ಮಹಿಳೆಯರ ಬಟ್ಟೆಗಳಿಗಾಗಿ ಒಂದು ಬೃಹತ್ ಸಮೀಕ್ಷೆಯನ್ನು ನಡೆಸಿತು. ಈ ಸಂಶೋಧನೆಯಲ್ಲಿ ಸುಮಾರು 15,000 ಮಹಿಳೆಯರ ದೇಹದ 59 ವಿಭಿನ್ನ ಭಾಗಗಳ ಅಳತೆಗಳನ್ನು ತೆಗೆದುಕೊಳ್ಳಲಾಯಿತು. ಈ ಡೇಟಾದ ಆಧಾರದ ಮೇಲೆಯೇ ಇಂದು ನಾವು ಬಳಸುತ್ತಿರುವ S, M, L, XL ನಂತಹ ಸೈಜ್ ಚಾರ್ಟ್ ಸಿದ್ಧವಾಯಿತು.
ದ್ವಿತೀಯ ಮಹಾಯುದ್ಧದ ನಂತರ ಕಾರ್ಖಾನೆಗಳಲ್ಲಿ ಬಟ್ಟೆಗಳ ಉತ್ಪಾದನೆ ವೇಗಗೊಂಡಾಗ, ಈ ಸೈಜ್ ಸಿಸ್ಟಮ್ ಅನ್ನು ಜಗತ್ತಿನಾದ್ಯಂತ ಎಲ್ಲರೂ ಒಪ್ಪಿಕೊಂಡು ಜಾರಿಗೆ ತಂದರು. ಇಂದು ನಮ್ಮ ಬಟ್ಟೆ ಖರೀದಿಯನ್ನು ಇಷ್ಟೊಂದು ಸುಲಭಗೊಳಿಸಿರುವ ಈ ಸೈಜಿಂಗ್ ವಿಧಾನ, ನಿಜಕ್ಕೂ ಯುದ್ಧದ ಕಾಲದಲ್ಲಿ ಉಂಟಾದ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ.








