ತಿರುಪತಿ: ಶ್ರೀರಾಮ ಮತ್ತು ಲಕ್ಷ್ಮಣರು ದಕ್ಷಿಣ ಭಾರತವನ್ನು ಆಕ್ರಮಿಸಿಕೊಳ್ಳಲು ದಕ್ಷಿಣಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಹೇಳಿಕೆ ನೀಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ತಿರುಪತಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ. ಹಿಂದೂ ಮುಖಂಡ ಹಾಗೂ ಟಿಟಿಡಿ (TTD) ಸದಸ್ಯರಾದ ಜಿ. ಭಾನುಪ್ರಕಾಶ್ ರೆಡ್ಡಿ ಅವರು ಮಂಗಳವಾರ ಈ ದೂರು ಸಲ್ಲಿಸಿದ್ದಾರೆ.
ಪ್ರಕಾಶ್ ರಾಜ್ ಅವರ ಈ ಹೇಳಿಕೆಯು ತೀವ್ರ ಅವಹೇಳನಕಾರಿಯಾಗಿದ್ದು, ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ವಿಭಜಕ ‘ಆರ್ಯ-ದ್ರಾವಿಡ’ ಸಿದ್ಧಾಂತವನ್ನು ಪ್ರತಿಪಾದಿಸಲು ನಟ ಪ್ರಕಾಶ್ ರಾಜ್ ಯತ್ನಿಸುತ್ತಿದ್ದಾರೆ ಎಂದು ಭಾನುಪ್ರಕಾಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಜನವರಿಯಲ್ಲಿ ನಡೆದ ‘ಕೇರಳ ಸಾಹಿತ್ಯೋತ್ಸವ’ದಲ್ಲಿ ಪ್ರಕಾಶ್ ರಾಜ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ವಿಡಿಯೋ ಏಪ್ರಿಲ್ 17ರಂದು ಭಾನುಪ್ರಕಾಶ್ ರೆಡ್ಡಿ ಅವರ ಗಮನಕ್ಕೆ ಬಂದಿತ್ತು. ತಕ್ಷಣವೇ ಅವರು ಪ್ರಕಾಶ್ ರಾಜ್ಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಲ್ಲದೆ, ತಿರುಪತಿ ಪೊಲೀಸರಿಗೂ ದೂರು ನೀಡಿದ್ದರು.
ಪೊಲೀಸರಿಗೆ ದೂರು ನೀಡಿದರೂ ಸಹ ಅವರು ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಬೇಸತ್ತ ಹಿಂದೂ ಮುಖಂಡರು ಇದೀಗ ನೇರವಾಗಿ ನ್ಯಾಯಾಲಯದ ಮೊರೆ ಹೋಗಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.








