ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳು ತೀವ್ರ ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ತೀವ್ರ ಆತಂಕ ಎದುರಾಗಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸದ್ಯ ಶೇ. 21 ರಷ್ಟು ಮುಂಗಾರು ಮಳೆ ಕೊರತೆಯಾಗಿದ್ದರೆ, ದೇಶಾದ್ಯಂತ ಒಟ್ಟಾರೆ ಶೇ. 64 ರಷ್ಟು ಮಳೆಯ ಅಭಾವ ಸೃಷ್ಟಿಯಾಗಿದೆ. ಜೂನ್ 4 ರಿಂದ 15 ರವರೆಗಿನ ಅವಧಿಯಲ್ಲಿ ದೇಶದಲ್ಲಿ ವಾಡಿಕೆಯಂತೆ 53 ಮಿ.ಮೀ ಮಳೆಯಾಗಬೇಕಿತ್ತು, ಆದರೆ ಕೇವಲ 19 ಮಿ.ಮೀ ನಷ್ಟು ಮಳೆ ಮಾತ್ರ ಸುರಿದಿದೆ ಎಂದು ವರದಿಯಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿದ್ದು, ಕರಾವಳಿ ಮತ್ತು ಕಾವೇರಿ ಕಣಿವೆಯಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಶೇ. 41 ರಷ್ಟು ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 36 ರಷ್ಟು ಕಡಿಮೆ ಮಳೆಯಾಗಿದೆ. ಇದೇ ಅವಧಿಯಲ್ಲಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಕ್ರಮವಾಗಿ ಶೇ. 2 ಮತ್ತು ಶೇ. 1 ರಷ್ಟು ಮಳೆ ಕೊರತೆ ದಾಖಲಾಗಿದೆ. ಪೂರ್ವ ಮುಂಗಾರು ಹಾಗೂ ದುರ್ಬಲ ಮುಂಗಾರಿನ ಪರಿಣಾಮವಾಗಿ ಕೃಷ್ಣಾ ಮತ್ತು ಕಾವೇರಿ ಕಣಿವೆಯ ಜಲಾಶಯಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಸದ್ಯ ಡ್ಯಾಂಗಳಲ್ಲಿ ಕೇವಲ ಶೇ. 23 ರಷ್ಟು ಮಾತ್ರ ನೀರು ಭರ್ತಿಯಾಗಿದೆ.
ಇದರ ನಡುವೆ ಮುಂದಿನ ತಿಂಗಳು ‘ಎಲ್ ನಿನೋ’ ಭೀತಿಯೂ ಎದುರಾಗಿದೆ. ಪೂರ್ವ ಮುಂಗಾರು ಉತ್ತಮವಾಗಿ ಬಾರದ ಕಾರಣ ಭೂಮಿಯಲ್ಲಿ ನೀರು ಸರಿಯಾಗಿ ಇಂಗಿಲ್ಲ. ಇದರ ಬೆನ್ನಲ್ಲೇ ಮುಂದಿನ ತಿಂಗಳು ‘ಎಲ್ ನಿನೋ’ ಪರಿಣಾಮ ರಾಜ್ಯದ ಮುಂಗಾರಿನ ಮೇಲೆ ಬೀರುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಮಳೆ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ಆತಂಕವಿದ್ದು, ಎಲ್ ನಿನೋ ಪರಿಣಾಮ ಎಷ್ಟಿರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.








