ಶಿವಮೊಗ್ಗ: ಸಾಗರ ನಗರಸಭೆಯ ಮಹಿಳಾ ಪೌರಕಾರ್ಮಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರೂ, ನಗರಸಭೆ ಪೌರಕಾರ್ಮಿಕರ ಮೇಸ್ತ್ರಿ ನಾಗರಾಜ ಸ್ವಾಮಿಯನ್ನು ಈವರೆಗೂ ಬಂಧಿಸದ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಸೋಮವಾರ ದಲಿತ ಸಂಘರ್ಷ ಸಮಿತಿಗಳ (DSS) ಒಕ್ಕೂಟದ ವತಿಯಿಂದ ನಗರಸಭೆ ಎದುರಿನ ಗಾಂಧಿ ಪ್ರತಿಮೆ ಸಮೀಪ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುತ್ತಿದ್ದಾನೆ ಕಾಮುಕ ಮೇಸ್ತ್ರಿ: ಎನ್. ಲಲಿತಮ್ಮ ಆಕ್ರೋಶ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ಎನ್.ಲಲಿತಮ್ಮ, ಸಾಗರ ನಗರಸಭೆಯಲ್ಲಿ ನಾಗರಾಜ್ ಮೇಸ್ತ್ರಿಯ ಉಪಟಳ ಮತ್ತು ಕಾಮುಕ ವರ್ತನೆಯಿಂದಾಗಿ ಮರ್ಯಾದಸ್ಥ ಹೆಣ್ಣುಮಕ್ಕಳು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಈತ ಹಣ, ರಾಜಕೀಯ ಪ್ರಭಾವ ಮತ್ತು ದುರಹಂಕಾರದಿಂದ ಮೆರೆಯುತ್ತಾ ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುತ್ತಿದ್ದಾನೆ ಎಂದು ಗುಡುಗಿದರು.
ಮಹಿಳಾ ಪೌರ ಕಾರ್ಮಿಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ವಾರ ಕಳೆದರೂ, ತನ್ನ ಚಾಣಾಕ್ಷತನ ಬಳಸಿ ಬಂಧನದಿಂದ ತಪ್ಪಿಸಿಕೊಂಡು ತಿರುಗುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆರೋಪಿ ನಾಗರಾಜ್ ವಿರುದ್ಧ ಈ ಹಿಂದೆಯೂ ಅನೇಕ ದೂರುಗಳಿವೆ. ಮಹಿಳೆಯೋರ್ವರಿಗೆ ಮೂರು ವರ್ಷದಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ, ಕಂದಾಯ ನಿರೀಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಹಾಗೂ ಪೊನ್ನಮ್ಮ ಎಂಬ ಮಹಿಳಾ ಪೌರಕಾರ್ಮಿಕರ ಮೇಲೂ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲಾ ದೌರ್ಜನ್ಯ ಎಸಗಿದರೂ ಯಾರದ್ದೋ ಕೃಪಾಕಟಾಕ್ಷದಿಂದ ಕೆಲಸದಲ್ಲಿ ಮುಂದುವರಿದಿದ್ದಾನೆ. ಪ್ರತಿಯೊಬ್ಬ ಪೌರಕಾರ್ಮಿಕನಿಂದ ಸಂಬಳವಾದ ತಕ್ಷಣ ತಲಾ 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾನೆ. ಮರ್ಯಾದೆಗೆ ಅಂಜಿ ಹಲವು ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿಲ್ಲ. ಅಧಿಕಾರಿಗಳು ತಕ್ಷಣವೇ ಈತನನ್ನು ಕರ್ತವ್ಯದಿಂದ ಅಮಾನತು ಮಾಡಬೇಕು” ಎಂದು ಅವರು ಒತ್ತಾಯಿಸಿದರು.

ಅಧಿಕಾರಿಗಳ ಶ್ರೀರಕ್ಷೆ, ಪೊಲೀಸರ ನಡೆಗೆ ಡಿಎಸ್ಎಸ್ ಅನುಮಾನ
ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ರೇವಪ್ಪ ಹೊಸಕೊಪ್ಪ ಮತ್ತು ಲಕ್ಷ್ಮಣ್ ಸಾಗರ್ ಮಾತನಾಡಿ, “ನಾಗರಾಜ್ ಮೇಸ್ತ್ರಿ ವಿರುದ್ಧ ಸಾಕಷ್ಟು ಗಂಭೀರ ದೂರುಗಳಿದ್ದರೂ ಅಧಿಕಾರಿಗಳ ಬೆಂಬಲದಿಂದ ಬಚಾವಾಗುತ್ತಿದ್ದಾನೆ. ಸಂತ್ರಸ್ತ ಮಹಿಳೆಯೇ ಖುದ್ದಾಗಿ ದೂರು ನೀಡಿದ್ದರೂ ಪೊಲೀಸರು ಇದುವರೆಗೆ ಆತನನ್ನು ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ, ನೊಂದ ಮಹಿಳೆಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಎಂ.ಬಿ. ಮಂಜಪ್ಪ, ಹೊಯ್ಸಳ ಗಣಪತಿಯಪ್ಪ, ಜಿನೇಶ್ ಕುಮಾರ್, ವೈ.ಕೆ. ರವಿಕುಮಾರ್, ಚೂಡಾಮಣಿ ರಾಮಚಂದ್ರ, ವಿಲ್ಸನ್ ಗೋನ್ಸಾಲ್ವಿಸ್, ಕಬೀರ್ ಚಿಪ್ಳಿ, ಸದ್ದಾಂ ದೊಡ್ಮನೆ, ಜಯರಾಂ ಸೂರನಗದ್ದೆ, ವೀಣಾ ನಾಯ್ಡು, ಕರವೇ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
BIG BREAKING: ಇರಾನ್-ಅಮೆರಿಕ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ: ಹೊರ್ಮುಝ್ ಜಲಸಂದಿ ಸಂಚಾರಕ್ಕೆ ಮುಕ್ತ








