ಚಿತ್ರದುರ್ಗ: ಜಿಲ್ಲೆಯ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಹಾಗೂ ನೇಕಾರಿಕೆ ಆಧಾರಿತ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. 2026-27ನೇ ಸಾಲಿನ ‘ನೇಕಾರ ಸಮ್ಮಾನ್ ಯೋಜನೆ’ಯಡಿ ವಾರ್ಷಿಕ ₹5,000 ಆರ್ಥಿಕ ಸಹಾಯಧನ ಪಡೆಯಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯಾರೆಲ್ಲಾ ಈ ಯೋಜನೆಗೆ ಅರ್ಹರು?
-
ಹಳೇ ಫಲಾನುಭವಿಗಳು: ಕಳೆದ 2025-26ನೇ ಸಾಲಿನಲ್ಲಿ ಈಗಾಗಲೇ ಈ ಯೋಜನೆಯ ಸೌಲಭ್ಯ ಪಡೆದಿರುವ ನೇಕಾರರು ಪ್ರಸ್ತುತ ವರ್ಷವೂ ಅರ್ಹರಾಗಿರುತ್ತಾರೆ. ಆದರೆ, ಅವರಲ್ಲಿ ಮೃತರಾದವರು, ವೃತ್ತಿಯನ್ನು ಕೈಬಿಟ್ಟವರು ಮತ್ತು ಬೇರೆ ಪ್ರದೇಶಗಳಿಗೆ ವಲಸೆ ಹೋದವರನ್ನು ಪಟ್ಟಿಯಿಂದ ಹೊರಗಿಡಲಾಗುತ್ತದೆ.
-
ಹೊಸ ನೇಕಾರರು: ಕಳೆದ ವರ್ಷ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಈ ಬಾರಿ ಹೊಸದಾಗಿ ಅರ್ಜಿ ಸಲ್ಲಿಸಲು ಸುವರ್ಣಾವಕಾಶ ನೀಡಲಾಗಿದೆ.
-
ಕಡ್ಡಾಯ ನಿಯಮ: ಸೌಲಭ್ಯ ಪಡೆಯಬಯಸುವ ನೇಕಾರರು ಪ್ರಸ್ತುತ ನೇಕಾರಿಕೆ ವೃತ್ತಿಯಲ್ಲೇ ಮುಂದುವರಿದಿರಬೇಕು ಹಾಗೂ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಅಥವಾ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ಕಡ್ಡಾಯವಾಗಿ ವಿಮೆ ನೋಂದಣಿ ಮಾಡಿಸಿರಬೇಕು.
ಹೊಸದಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಹೊಸದಾಗಿ ನೋಂದಣಿ ಮಾಡಿಕೊಳ್ಳುವ ನೇಕಾರರು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಈ ಕೆಳಗಿನ ದಾಖಲಾತಿಗಳ ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ:
-
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್.
-
ನೇಕಾರ ಸಮ್ಮಾನ್ ಐಡಿ ಅಥವಾ ಪೆಹಚಾನ್ ಕಾರ್ಡ್.
-
ನೇಕಾರರ ಅಧಿಕೃತ ಗುರುತಿನ ಚೀಟಿ.
-
ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ಬುಕ್ ಪ್ರತಿ.
-
ತಾವು ನೇಕಾರಿಕೆ ಕಸುಬಿನಲ್ಲಿ ತೊಡಗಿಕೊಂಡಿರುವಾಗ ತೆಗೆಸಿದ ಇತ್ತೀಚಿನ ಫೋಟೋ.
-
PMJJBY ಅಥವಾ PMSBY ವಿಮಾ ಯೋಜನೆಗೆ ಒಳಪಟ್ಟಿರುವ ಕುರಿತಾದ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ನವೀಕರಣದ (Renewal) ರಶೀದಿ.
ಅರ್ಜಿ ಸಲ್ಲಿಕೆ ಹೇಗೆ? ಮತ್ತು ಎಲ್ಲಿ?
ಅರ್ಹ ಫಲಾನುಭವಿಗಳು ತಮ್ಮ ಸಂಪೂರ್ಣ ವಿವರಗಳನ್ನು ಸ್ಥಳೀಯ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿ ಅಥವಾ ನೇಕಾರರ ಸಹಕಾರ ಸಂಘಗಳ ಮುಖಾಂತರ ತಲುಪಿಸಬಹುದು.
ಇಲ್ಲವೇ ಚಿತ್ರದುರ್ಗದ ಬಿ.ಡಿ. ರಸ್ತೆಯ ಯೂನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕದಲ್ಲಿರುವ “ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ” ಇಲ್ಲಿಗೆ ನೇರವಾಗಿ ಭೇಟಿ ನೀಡಿ ದಿನಾಂಕ 20-07-2026 ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಯೋಜನೆಗೆ ಸಂಬಂಧಿಸಿದ ಯಾವುದೇ ಗೊಂದಲ ಅಥವಾ ಹೆಚ್ಚಿನ ವಿವರಗಳಿಗಾಗಿ ಕಚೇರಿಯ ಅಧಿಕೃತ ದೂರವಾಣಿ ಸಂಖ್ಯೆ 08194-221426 ಗೆ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Jackfruit Seeds: ಹಲಸಿನ ಹಣ್ಣು ತಿಂದು ಬೀಜ ಬಿಸಾಡುವ ಮುನ್ನಾ ಈ 7 ಅದ್ಭುತ ಆರೋಗ್ಯಕಾರಿ ಪ್ರಯೋಜನವೇನು ಅಂತ ಓದಿ!








