ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಬೆನ್ನಲ್ಲೇ, ಇದೀಗ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಗೂ ಸರ್ಕಾರ ದೊಡ್ಡ ಸರ್ಜರಿ ಮಾಡಲು ಮುಂದಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ವಾಣಿಜ್ಯ ಮಳಿಗೆಗಳಿಗೆ ಶಾಕ್!
ಪ್ರಸ್ತುತ ರಾಜ್ಯದಲ್ಲಿ ಸುಮಾರು 1.74 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿವೆ. ಇದಕ್ಕಾಗಿ ಸರ್ಕಾರ ಪ್ರತಿ ತಿಂಗಳು ಅಂದಾಜು 440 ಕೋಟಿ ರೂ. ಭಾರಿ ವೆಚ್ಚ ಭರಿಸುತ್ತಿದೆ. ಆದರೆ, ಇತ್ತೀಚಿನ ಪರಿಶೀಲನೆ ವೇಳೆ ಗೃಹ ಬಳಕೆಯ ಹೆಸರಿನಲ್ಲಿ ಹಲವರು ವಾಣಿಜ್ಯ ಮಳಿಗೆಗಳು ಹಾಗೂ ವ್ಯಾಪಾರ ಕೇಂದ್ರಗಳಿಗೂ ಉಚಿತ ವಿದ್ಯುತ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ವಾಣಿಜ್ಯ ಉದ್ದೇಶಕ್ಕೆ ಉಚಿತ ವಿದ್ಯುತ್ ಬಳಸುತ್ತಿದ್ದವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಸಜ್ಜಾಗಿದೆ.
ಮರು ಪರಿಶೀಲನೆಗೆ (Re-Verification) ನಿರ್ಧಾರ
ಯೋಜನೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲು ಸರ್ಕಾರ ಸೇವಾಸಿಂಧು ಪೋರ್ಟಲ್ ಮೂಲಕ ಫಲಾನುಭವಿಗಳ ಪುನರ್ ಪರಿಶೀಲನೆ (Re-verification) ನಡೆಸಲು ತೀರ್ಮಾನಿಸಿದೆ.
ಪ್ರಮುಖ ಮಾನದಂಡಗಳು: ಆಧಾರ್ ಕಾರ್ಡ್ (Aadhaar), ಕೆವೈಸಿ (KYC) ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಪ್ರತಿಯೊಬ್ಬ ಫಲಾನುಭವಿಯ ವಿವರಗಳನ್ನು ಕಡ್ಡಾಯವಾಗಿ ಮರುಪರಿಶೀಲಿಸಲಾಗುತ್ತದೆ.
ಅನ್ಯ ರಾಜ್ಯದವರಿಗೆ ಬ್ರೇಕ್: ಒಂದಕ್ಕಿಂತ ಹೆಚ್ಚು ಮೀಟರ್ ಹೊಂದಿರುವವರು ಹಾಗೂ ರಾಜ್ಯದಲ್ಲಿ ವಾಸವಿರದ ಅನ್ಯ ರಾಜ್ಯದವರಿಗೂ ಗೃಹಜ್ಯೋತಿ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಮುಂದಿನ ಎರಡು ದಿನಗಳಲ್ಲಿ ಅಧಿಕೃತ ಆದೇಶ?
ದುರ್ಬಳಕೆ ತಡೆದು, ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಕೈಗೊಳ್ಳಲಿರುವ ಈ ಹೊಸ ನಿಯಮಾವಳಿಗಳ ಕುರಿತು ಇನ್ನು ಎರಡು ದಿನಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.








