ವಾಷಿಂಗ್ಟನ್:ಓಮನ್ ಕರಾವಳಿಯ ಪಲಾವ್ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ‘ಎಂ/ಟಿ ಸೆಟ್ಟೆಬೆಲ್ಲೋ’ (M/T Settebello) ಮೇಲೆ ಅಮೆರಿಕದ ಮಿಲಿಟರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ದುರಂತ ಅಂತ್ಯ ಕಂಡಿದ್ದಾರೆ. ಆದರೆ, ಈ ದಾಳಿ ನಡೆಸುವ ಮುನ್ನ ಅಮೆರಿಕ ಪಡೆಗಳು ಆ ಹಡಗಿಗೆ ಬರೋಬ್ಬರಿ 60ಕ್ಕೂ ಹೆಚ್ಚು ಬಾರಿ ಮೌಖಿಕ ಎಚ್ಚರಿಕೆಗಳನ್ನು ನೀಡಿದ್ದವು ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.
ಇರಾನ್ ಮೇಲಿನ ಜಾಗತಿಕ ನಿರ್ಬಂಧಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಇರಾನ್ನ ತೈಲವನ್ನು ಸಾಗಿಸುತ್ತಿದ್ದ ಈ ‘ಶ್ಯಾಡೋ ಫ್ಲೀಟ್’ (ಗೂಢಚಾರ/ಅಕ್ರಮ ಸಾರಿಗೆ) ಹಡಗು ಅಮೆರಿಕದ ನೌಕಾಪಡೆಯ ದಿಗ್ಬಂಧನವನ್ನು ಮುರಿಯಲು ಯತ್ನಿಸುತ್ತಿತ್ತು ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ವರದಿಗಳ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಅಮೆರಿಕದ ಯುದ್ಧವಿಮಾನಗಳು ಕನಿಷ್ಠ 8 ಬಾರಿ ಹಡಗಿನ ಮೇಲ್ಭಾಗದಲ್ಲಿ ಹಾರಾಟ ನಡೆಸಿ, ಎಚ್ಚರಿಕೆಯ ಫ್ಲೇರ್ಗಳನ್ನು (ಬೆಂಕಿ ಉಂಡೆ) ಹಾರಿಸುವ ಮೂಲಕ ಸಿಗ್ನಲ್ ನೀಡಿದ್ದವು. ಆದರೂ ಹಡಗಿನ ಸಿಬ್ಬಂದಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಂದೆ ಸಾಗಿದ್ದರು. ಬುಧವಾರ ದಾಳಿ ನಡೆಸುವ ಕೇವಲ 15 ನಿಮಿಷಗಳ ಮುಂಚೆಯೂ ಇಂಜಿನ್ ಕೊಠಡಿಯಿಂದ ಹೊರಬರುವಂತೆ ಎರಡು ಅಂತಿಮ ಆದೇಶಗಳನ್ನು ನೀಡಲಾಗಿತ್ತು. ಆದರೆ ಸಿಬ್ಬಂದಿ ಅದಕ್ಕೂ ಮಣಿಯದಿದ್ದಾಗ, ಅಮೆರಿಕದ ಯುದ್ಧವಿಮಾನವು ಹಡಗಿನ ಇಂಜಿನ್ ರೂಮ್ ಗುರಿಯಾಗಿಸಿ ‘ಪ್ರೆಸಿಷನ್ ಮಿಸೈಲ್’ (ನಿಖರ ಕ್ಷಿಪಣಿ) ದಾಳಿ ನಡೆಸಿತು.
ಕ್ಷಿಪಣಿ ದಾಳಿಯಿಂದಾಗಿ ಇಂಜಿನ್ ರೂಮ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿ ಪೈಕಿ 21 ಜನರನ್ನು ಓಮನ್ ನೌಕಾಪಡೆ ಸುರಕ್ಷಿತವಾಗಿ ರಕ್ಷಿಸಿದೆ. ಆದರೆ ಇಂಜಿನ್ ರೂಮ್ನಲ್ಲಿದ್ದ ಡೆಕ್ ಕ್ಯಾಡೆಟ್ ಆದಿತ್ಯ ಶರ್ಮಾ, ಇಂಜಿನ್ ಫಿಟ್ಟರ್ ಶಿವಾನಂದ್ ಚೌರಾಸಿಯಾ ಮತ್ತು ಚೀಫ್ ಇಂಜಿನಿಯರ್ ಪಟ್ನಾಲ ಸುರೇಶ್ ಎಂಬ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ.
ಈ ಘಟನೆಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, “ವಾಣಿಜ್ಯ ಹಡಗುಗಳ ಮೇಲಿನ ಇಂತಹ ಮಾರಣಾಂತಿಕ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ” ಎಂದು ಭಾರತದ ತೀವ್ರ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಎಂ/ಟಿ ಸೆಟ್ಟೆಬೆಲ್ಲೋ ಟ್ಯಾಂಕರ್ನಲ್ಲಿ ಒಟ್ಟು 28 ಸಿಬ್ಬಂದಿ ಇದ್ದರು. ಅದರಲ್ಲಿ 24 ಭಾರತೀಯರು, ಇಬ್ಬರು ಪಾಕಿಸ್ತಾನಿಗಳು, ಒಬ್ಬ ಉಕ್ರೇನ್ ಹಾಗೂ ಒಬ್ಬ ರಷ್ಯಾ ಪ್ರಜೆಯಿದ್ದರು. ಸದ್ಯ ಮೃತಪಟ್ಟ ಭಾರತೀಯರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಭಾರತೀಯ ರಾಯಭಾರ ಕಚೇರಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.








