ಶಿವಮೊಗ್ಗ: ಜಿಲ್ಲೆಯ ಸಾಗರ ನಗರಸಭೆಯ ಪೌರಕಾರ್ಮಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ನಗರಸಭೆಯ ಪೌರಕಾರ್ಮಿಕ ಮೇಸ್ತ್ರಿ ಹಾಗೂ ಪ್ರಭಾರಿ ಪೌರಕಾರ್ಮಿಕ ಆರೋಗ್ಯ ಅಧಿಕಾರಿಯಾಗಿರುವ ನಾಗರಾಜ್ ಎಂಬುವವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಹೀಗಾಗಿ ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಮತ್ತು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ನಾಳೆ ನಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಸಾಗರ ತಾಲ್ಲೂಕು ಡಿಎಸ್ಎಸ್ ಸಂಚಾಲಕ ಲಕ್ಷ್ಮಣ್ ಸಾಗರ್ ತಿಳಿಸಿದ್ದಾರೆ.
ನಾಳೆ ನಗರಸಭೆ ಎದುರು ಪ್ರತಿಭಟನೆ:
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಾಗರ ನಗರಸಭೆ ಮೆಸ್ತ್ರಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಸದ್ಯಕ್ಕೆ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಸಾಗರ ಡಿಎಸ್ಎಸ್ (DSS) ಸಂಘಟನೆಗಳ ಒಕ್ಕೂಟಗಳ ವತಿಯಿಂದ ನಾಳೆ ಬೆಳಗ್ಗೆ 10:30 ಕ್ಕೆ ಸಾಗರ ನಗರಸಭೆಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಸಂಘಟನೆಗಳ ಆಗ್ರಹ:
ಪೌರಕಾರ್ಮಿಕ ಮಹಿಳೆಯ ಮೇಲೆ ನಡೆದಿರುವ ಈ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ತೀವ್ರವಾಗಿ ಖಂಡಿಸಿರುವ ದಲಿತ ಸಂಘಟನೆಗಳು, ಆರೋಪಿತ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಆತನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು (Suspend) ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಗೆ ಸಾಗರ ತಾಲ್ಲೂಕಿನ ಎಲ್ಲಾ ಡಿಎಸ್ಎಸ್ ಪದಾಧಿಕಾರಿಗಳು, ಪ್ರಗತಿಪರ ಚಿಂತಕರು, ಮಹಿಳಾ ಒಕ್ಕೂಟಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನೊಂದ ಮಹಿಳೆಗೆ ನ್ಯಾಯ ಕೊಡಿಸಲು ಮತ್ತು ಮಹಿಳೆಯ ಮೇಲಾದ ದೌರ್ಜನ್ಯವನ್ನು ಖಂಡಿಸಲು ಕೈಜೋಡಿಸಬೇಕು ಎಂಬುದಾಗಿ ಸಾಗರ ತಾಲ್ಲೂಕು ಡಿಎಸ್ಎಸ್ ಸಂಚಾಲಕ ಲಕ್ಷ್ಮಣ್ ಸಾಗರ್ ಅವರು ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BREAKING: ಮಧ್ಯಪ್ರದೇಶ ಭೀಕರ ದುರಂತ: ರೈಲಿನಿಂದ ಕೆಳಗಿಳಿದ ಪ್ರಯಾಣಿಕರ ಮೇಲೆ ಹರಿದ ಎಕ್ಸ್ಪ್ರೆಸ್, ಹಲವರು ಸಾವು!








