ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಬೆಂಗಳೂರು ಮೂಲದ ಪೊಲೀಸ್ ಸಿಬ್ಬಂದಿಯೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದೂರುದಾರರೊಬ್ಬರಿಂದ ₹40,000 ಲಂಚ ಪಡೆಯುತ್ತಿದ್ದಾಗ ಬೆಂಗಳೂರಿನ ಎಚ್‌ಎಎಲ್ (HAL) ಪೊಲೀಸ್ ಠಾಣೆಯ ಮೂವರು ಪೊಲೀಸರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬಂಧಿತರನ್ನು ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ಅನಿತಾ ಹಾಗೂ ಹೆಡ್ ಕಾನ್ಸ್ಟೇಬಲ್‌ಗಳಾದ ಯತೀಶ್ ಕುಮಾರ್ ಮತ್ತು ಉಳುವಪ್ಪ ಎಂದು ಗುರುತಿಸಲಾಗಿದೆ. ಕರ್ತವ್ಯದ ನಿಮಿತ್ತ ಜೈಪುರಕ್ಕೆ ತೆರಳಿದ್ದ ಈ ಮೂವರು ಅಧಿಕಾರಿಗಳು ಅಲ್ಲಿಯೇ ಲಂಚದ ಜಾಲ ಹೆಣೆದು ಈಗ ಕಾನೂನಿನ ಕೈಗೆ ಸಿಲುಕಿದ್ದಾರೆ.
ವರದಕ್ಷಿಣೆ ಪ್ರಕರಣದ ತನಿಖೆಗೆ ಹೋಗಿದ್ದ ತಂಡ
ಮೂಲಗಳ ಪ್ರಕಾರ, ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ತನಿಖೆಗಾಗಿ ಈ ಮೂವರು ಪೊಲೀಸರ ತಂಡ ಜೈಪುರಕ್ಕೆ ತೆರಳಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ದೂರುದಾರರನ್ನು ಭೇಟಿಯಾಗಿದ್ದ ಪೊಲೀಸರು, ತನಿಖೆಯಲ್ಲಿ ರಿಯಾಯಿತಿ ನೀಡುವುದಾಗಿ ಮತ್ತು ಪ್ರಕರಣದಿಂದ ಸುಲಭವಾಗಿ ಪಾರು ಮಾಡುವುದಾಗಿ ಭರವಸೆ ನೀಡಿದ್ದರು.
₹2 ಲಕ್ಷಕ್ಕೆ ಬೇಡಿಕೆ, ₹40 ಸಾವಿರ ಪಡೆಯುವಾಗ ಟ್ರ್ಯಾಪ್
ಪ್ರಕರಣವನ್ನು ಇತ್ಯರ್ಥಪಡಿಸಲು ಮತ್ತು ಆರೋಪಿಗಳಿಗೆ ಪರಿಹಾರ ಒದಗಿಸುವ ನೆಪದಲ್ಲಿ ಪಿಎಸ್‌ಐ ಅನಿತಾ ನೇತೃತ್ವದ ತಂಡವು ದೂರುದಾರರಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಈ ಕುರಿತು ತಕ್ಷಣವೇ ಜೈಪುರದ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳಿಗೆ ದೂರು ನೀಡಿದ್ದರು. ಯೋಜನೆಯಂತೆ ಮೊದಲ ಕಂತಾಗಿ ₹40,000 ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗಂಗೌರ್ ಹೋಟೆಲ್‌ನಲ್ಲಿ ಸಿನೆಮಾ ಮಾದರಿ ಕಾರ್ಯಾಚರಣೆ
ಜೈಪುರದ ಪ್ರಸಿದ್ಧ ‘ಗಂಗೌರ್ ಹೋಟೆಲ್’ನಲ್ಲಿ ಈ ಮೂವರು ಪೊಲೀಸರು ತಂಗಿದ್ದರು. ಲಂಚದ ಹಣದೊಂದಿಗೆ ದೂರುದಾರರು ಹೋಟೆಲ್‌ಗೆ ಆಗಮಿಸುತ್ತಿದ್ದಂತೆ, ಜೈಪುರ ಎಸಿಬಿ ತಂಡವು ಹೋಟೆಲ್ ಸುತ್ತಲೂ ನಿಗಾ ಇಟ್ಟಿತ್ತು. ದೂರುದಾರರಿಂದ ಮೂವರು ಪೊಲೀಸರು ಹಣವನ್ನು ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಹಣದ ಸಮೇತ ಮೂವರನ್ನೂ ವಶಕ್ಕೆ ಪಡೆದಿದ್ದಾರೆ.
ಎಎಸ್‌ಪಿ ಭೂಪೇಂದ್ರ ಚೌದರಿ ನೇತೃತ್ವದಲ್ಲಿ ದಾಳಿ
ಜೈಪುರ ಎಸಿಬಿ ವಿಭಾಗದ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ASP) ಭೂಪೇಂದ್ರ ಚೌದರಿ ಅವರ ನೇತೃತ್ವದ ವಿಶೇಷ ತಂಡವು ಅತ್ಯಂತ ಚಾಣಾಕ್ಷತನದಿಂದ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ. ಸದ್ಯ ಮೂವರನ್ನೂ ವಶಕ್ಕೆ ಪಡೆದಿರುವ ಜೈಪುರ ಎಸಿಬಿ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಾನೂನು ರಕ್ಷಕರೇ ಹೀಗೆ ಪರರಾಜ್ಯದಲ್ಲಿ ಲಂಚ ಪಡೆದು ಸಿಕ್ಕಿಬಿದ್ದಿರುವುದು ಇಲಾಖೆಗೆ ತೀವ್ರ ಮುಜುಗರ ತಂದಿಟ್ಟಿದೆ.








