ಮಂಡ್ಯ: ಜಮೀನಿನ ಪೋಡಿ ಹಾಗೂ ಖಾತೆ ಮಾಡಿಕೊಡಲು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ನಡೆದಿದೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಅಧಿಕಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ (ಕಂದಾಯ ನಿರೀಕ್ಷಕ) ಮಧುಸೂದನ್ ಲೋಕಾಯುಕ್ತ ದಾಳಿಗೆ ಸಿಲುಕಿದ ಅಧಿಕಾರಿಯಾಗಿದ್ದಾರೆ. ಜಮೀನು ಕೆಲಸಕ್ಕಾಗಿ ಸಾರ್ವಜನಿಕರನ್ನು ಅಲೆದಾಡಿಸಿ, ಹಣಕ್ಕಾಗಿ ಪೀಡಿಸುತ್ತಿದ್ದ ಇವರು, ಇಂದು ಮುಂಗಡ ಹಣ ಪಡೆಯುವಾಗ ರಂಗು ರಂಗಾಗಿ ಸಿಕ್ಕಿಬಿದ್ದಿದ್ದಾರೆ.
ಹಿನ್ನೆಲೆ ಏನು?
ದಳವಾಯಿಕೊಡಹಳ್ಳಿ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಎಂಬುವವರಿಗೆ ಸೇರಿದ ದಳವಾಯಿಕೋಡಹಳ್ಳಿ ಗ್ರಾಮದ ಸರ್ವೇ ನಂಬರ್ 72ರಲ್ಲಿ 5 ಎಕರೆ 28 ಗುಂಟೆ ಇನಾಮಿ ಜಮೀನಿದೆ. ಈ ಜಮೀನನ್ನು ಪೋಡಿ ಮಾಡಿ, ಖಾತೆ ಮಾಡಿಕೊಡಲು ರೆವಿನ್ಯೂ ಇನ್ಸ್ಪೆಕ್ಟರ್ ಮಧುಸೂದನ್ ಅವರು ಬರೋಬ್ಬರಿ ಎಕರೆಗೆ 2 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದಷ್ಟೇ ಅಲ್ಲದೆ, ನಂಜುಂಡಸ್ವಾಮಿ ಅವರ ತಾಯಿ ಕೆಂಪಮ್ಮ ಅವರ ಹೆಸರಿನಲ್ಲಿರುವ ಮತ್ತೊಂದು 12 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಬದಲಾವಣೆ ಮಾಡಿಕೊಡಲು ಕೂಡ ಮಧುಸೂದನ್ ಲಂಚದ ಹಣಕ್ಕಾಗಿ ಪಟ್ಟು ಹಿಡಿದಿದ್ದರು. ಇಷ್ಟೊಂದು ದೊಡ್ಡ ಮೊತ್ತದ ಲಂಚ ನೀಡಲು ನಿರಾಕರಿಸಿದ ನಂಜುಂಡಸ್ವಾಮಿ, ಭ್ರಷ್ಟ ಅಧಿಕಾರಿಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು.
ಲೋಕಾಯುಕ್ತರ ಮಿಂಚಿನ ದಾಳಿ
ನಂಜುಂಡಸ್ವಾಮಿ ಅವರು ನೀಡಿದ ಖಚಿತ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯ ಸುತ್ತಮುತ್ತ ನಿಗಾ ವಹಿಸಿದ್ದರು. ಇಂದು ಮಳವಳ್ಳಿ ತಾಲೂಕು ಕಚೇರಿಯಲ್ಲಿ ನಂಜುಂಡಸ್ವಾಮಿ ಅವರಿಂದ ಮಧುಸೂದನ್ 10 ಸಾವಿರ ರೂಪಾಯಿ ಮುಂಗಡ ಹಣವನ್ನು ಪಡೆಯುತ್ತಿದ್ದ ಸಕಾಲದಲ್ಲೇ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ, ಆರೋಪಿಯನ್ನು ಲಂಚದ ಹಣದ ಸಮೇತ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ದಾಳಿ ತಂಡದಲ್ಲಿದ್ದವರು: ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವ ವಹಿಸಿದ್ದರು. ತಂಡದಲ್ಲಿ ಇನ್ಸ್ಪೆಕ್ಟರ್ ಬ್ಯಾಡರ ಗೌಡ, ಸಿಬ್ಬಂದಿಗಳಾದ ಸಿದ್ದಲಿಂಗಸ್ವಾಮಿ, ಶರತ್, ಮಹದೇವ, ಮಾನಸ ಹಾಗೂ ಶ್ರೀದೇವಿ ಪಾಲ್ಗೊಂಡಿದ್ದರು. ಆರೋಪಿತ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.








