ಜೈಪುರ: ವಿಚ್ಛೇದನ ಒಪ್ಪಂದಕ್ಕೆ ಸಹಿ ಹಾಕಿ, ಜೀವನಾಂಶವಾಗಿ 20 ಲಕ್ಷ ರೂಪಾಯಿ ಪಡೆದ ನಂತರವೂ ಮಾಜಿ ಪತಿ ಮತ್ತು ಅವರ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪತಿ ಹಾಗೂ ಅವರ ವಯೋವೃದ್ಧ ಪೋಷಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ವೈವಾಹಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೊಸೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ 65 ವರ್ಷದ ಸತ್ಯಪಾಲ್ ಶರ್ಮಾ ಮತ್ತು ಅವರ 62 ವರ್ಷದ ಪತ್ನಿ ಸೀತಾ ದೇವಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಈ ಆದೇಶ ನೀಡಿದ್ದಾರೆ.
20 ಲಕ್ಷ ರೂ. ಜೀವನಾಂಶದೊಂದಿಗೆ ವಿಚ್ಛೇದನ ಇತ್ಯರ್ಥ
ವರದಿಗಳ ಪ್ರಕಾರ, ಈ ದಂಪತಿಯ ವಿವಾಹವು 2009ರ ನವೆಂಬರ್‌ನಲ್ಲಿ ನಡೆದಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2013 ರಲ್ಲಿ ಮಹಿಳೆ ತನ್ನ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 498ಎ (ಪತಿ ಅಥವಾ ಪತಿಯ ಸಂಬಂಧಿಕರಿಂದ ಕ್ರೌರ್ಯ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧ 2018 ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿ, ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು.
ಮತ್ತೊಂದೆಡೆ, ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದ ಜೈಪುರದ ಕೌಟುಂಬಿಕ ನ್ಯಾಯಾಲಯವು 2019ರ ಅಕ್ಟೋಬರ್‌ನಲ್ಲಿ ವಿಚ್ಛೇದನ ಮಂಜೂರು ಮಾಡಿತ್ತು. ಇದನ್ನು ಮಹಿಳೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರಾದರೂ, ತದನಂತರ ಹೈಕೋರ್ಟ್ ಸಮ್ಮುಖದಲ್ಲೇ ಇಬ್ಬರ ನಡುವೆ ರಾಜಿ ಸಂಧಾನ ಏರ್ಪಟ್ಟಿತ್ತು. ಒಪ್ಪಂದದ ಪ್ರಕಾರ, ಪತಿ ತನಗೆ 20 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ (Alimony) ನೀಡಲು ಒಪ್ಪಿದ ಹಿನ್ನೆಲೆಯಲ್ಲಿ ಮಹಿಳೆ ತನ್ನ ಮೇಲ್ಮನವಿಯನ್ನು ಹಿಂಪಡೆದಿದ್ದರು. ಅದರಂತೆ ಫೆಬ್ರವರಿ 2025 ರಲ್ಲಿ ಅಧಿಕೃತ ವಿಚ್ಛೇದನ ಆದೇಶ ಹೊರಬಿದ್ದಿತ್ತು.
ನ್ಯಾಯಾಲಯಕ್ಕೆ ಬಾರದ ದೂರುದಾರೆ!
ರಾಜಿ ಒಪ್ಪಂದವಾಗಿದ್ದರೂ, ಮಹಿಳೆ ಪೊಲೀಸ್ ಠಾಣೆಯಲ್ಲಿದ್ದ ಕ್ರಿಮಿನಲ್ ಪ್ರಕರಣವನ್ನು ಹಿಂಪಡೆದಿರಲಿಲ್ಲ. ಅತ್ತ ವಿಚಾರಣಾ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯಲು ಸಹ ಆಕೆ ಹಾಜರಾಗಿರಲಿಲ್ಲ. 2018 ರಿಂದೀಚೆಗೆ ನ್ಯಾಯಾಲಯವು ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ಮಹಿಳೆ ಅಥವಾ ಆಕೆಯ ಕಡೆಯ ಸಾಕ್ಷಿಗಳು ಕೋರ್ಟ್‌ಗೆ ಬಂದಿರಲಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿದೆ.
ಅತ್ತೆ-ಮಾವನ ವಿರುದ್ಧದ ಪ್ರಕರಣ ರದ್ದು
ಈ ಕುರಿತು ಕಠಿಣ ನಿಲುವು ತಳೆದ ಹೈಕೋರ್ಟ್, “ರಾಜಿ ಒಪ್ಪಂದದ ನಿಯಮಗಳ ಆಧಾರದ ಮೇಲೆ ಯಾವುದೇ ಆಕ್ಷೇಪವಿಲ್ಲದೆ ವಿಚ್ಛೇದನ ಪಡೆದುಕೊಂಡಿರುವ ದೂರುದಾರೆ, ಈಗ ತನ್ನ ನಿಲುವಿನಿಂದ ಹಿಂದೆ ಸರಿಯಲು ಅಥವಾ ಉಲ್ಟಾ ಹೊಡೆಯಲು ಅವಕಾಶ ನೀಡಲಾಗುವುದಿಲ್ಲ” ಎಂದು ಹೇಳಿದೆ.
ಉಭಯ ಪಕ್ಷಗಳ ನಡುವೆ ನಡೆದಿರುವ ಒಪ್ಪಂದಗಳನ್ನು ಗಮನಿಸಿದರೆ, ಇದು ಕೇವಲ ಪರಸ್ಪರ ಒಪ್ಪಿಗೆಯ ವಿಚ್ಛೇದನ ಮಾತ್ರವಲ್ಲದೆ, ಕ್ರಿಮಿನಲ್ ನಡಾವಳಿಗಳನ್ನು ರದ್ದುಗೊಳಿಸುವುದನ್ನೂ ಒಳಗೊಂಡಿ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣವನ್ನು ಮುಂದುವರಿಸುವುದು ಕಾನೂನಿನ ದುರುಪಯೋಗವಾಗುತ್ತದೆ” ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ವೃದ್ಧ ಅತ್ತೆ-ಮಾವ ಹಾಗೂ ಪತಿಯ ಮೇಲಿದ್ದ ಪ್ರಕರಣವನ್ನು ವಜಾಗೊಳಿಸಿದ್ದಾರೆ.








