ನ್ಯೂಯಾರ್ಕ್ (ವಿಶ್ವಸಂಸ್ಥೆ):ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಭವಿಷ್ಯದಲ್ಲಿ ಮಾನವಕುಲದ ಅಸ್ತಿತ್ವಕ್ಕೆ ದೊಡ್ಡ ಜಲಕಂಟಕವಾಗಿ ಪರಿಣಮಿಸಲಿದೆ ಎಂದು ವಿಶ್ವಸಂಸ್ಥೆಯ (UN) ಇತ್ತೀಚಿನ ವರದಿಯೊಂದು ಎಚ್ಚರಿಸಿದೆ.
ತೀವ್ರವಾಗಿ ಬೆಳೆಯುತ್ತಿರುವ AI ಕಂಪನಿಗಳ ಕಾರ್ಯವೈಖರಿಯಿಂದಾಗಿ 2030 ರ ವೇಳೆಗೆ ಜಗತ್ತಿನಾದ್ಯಂತ ಸುಮಾರು 130 ಕೋಟಿ (1.3 ಬಿಲಿಯನ್) ಜನರ ಕುಡಿಯುವ ನೀರಿನ ಅಗತ್ಯತೆಗೆ ಭಾರಿ ಕೊರತೆ ಎದುರಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಈ ಜಾಗತಿಕ ಜಲ ಬಿಕ್ಕಟ್ಟನ್ನು ತಡೆಯಲು ಈಗಿನಿಂದಲೇ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ವಿಶ್ವಸಂಸ್ಥೆ ಜಗತ್ತಿನ ದೇಶಗಳಿಗೆ ಕರೆ ನೀಡಿದೆ.
ವರದಿಯ ಪ್ರಕಾರ ‘AI’ ನಿಂದ ಜಲಕ್ಷಾಮ ಎದುರಾಗಲು ಕಾರಣವೇನು?
ಡೇಟಾ ಸೆಂಟರ್‌ಗಳ ಅತಿಯಾದ ನೀರಿನ ಬಳಕೆ: ಚಾಟ್‌ಜಿಪಿಟಿ (ChatGPT), ಗೂಗಲ್ ಜೆಮಿನಿ (Gemini) ನಂತಹ ಬೃಹತ್ AI ಮಾದರಿಗಳನ್ನು ರನ್ ಮಾಡಲು ಮತ್ತು ಲಕ್ಷಾಂತರ ಸರ್ವರ್‌ಗಳನ್ನು ಒಳಗೊಂಡಿರುವ ‘ಡೇಟಾ ಸೆಂಟರ್’ಗಳನ್ನು (Data Centers) ತಂಪಾಗಿ ಇಡಲು (Cooling System) ದಿನಂಪ್ರತಿ ಕೋಟ್ಯಂತರ ಲೀಟರ್ ಶುದ್ಧ ನೀರಿನ ಅಗತ್ಯವಿರುತ್ತದೆ.
ಭಾರಿ ಪ್ರಮಾಣದ ವಿದ್ಯುತ್ ಮತ್ತು ಇಂಧನ ವ್ಯಯ: AI ತಂತ್ರಜ್ಞಾನದ ಪ್ರಕ್ರಿಯೆಗಳು ಅತಿ ಹೆಚ್ಚು ಶಾಖವನ್ನು ಉತ್ಪಾದಿಸುತ್ತವೆ. ಈ ಶಾಖವನ್ನು ನಿಯಂತ್ರಿಸಲು ನೈಸರ್ಗಿಕ ಜಲಮೂಲಗಳಿಂದ ಅಪಾರ ಪ್ರಮಾಣದ ನೀರನ್ನು ಬಳಸಲಾಗುತ್ತಿದ್ದು, ಇದು ಅಂತರ್ಜಲ ಮಟ್ಟ ಕುಸಿಯಲು ಪ್ರಮುಖ ಕಾರಣವಾಗುತ್ತಿದೆ.
ಭವಿಷ್ಯದ ಭೀತಿ: ಇದೇ ವೇಗದಲ್ಲಿ AI ಬಳಕೆ ಮುಂದುವರಿದರೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ಪ್ರಪಂಚದ ಪ್ರಮುಖ ನಗರಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವರದಿ ಕಳವಳ ವ್ಯಕ್ತಪಡಿಸಿದೆ.








