ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಶೀಲತೆ ಹೆಚ್ಚಿಸಲು ರಾಜ್ಯದ 2 ಮತ್ತು 3ನೆ ಶ್ರೇಣಿಯ ನಗರ – ಪಟ್ಟಣಗಳ 50 ಸರ್ಕಾರಿ ಕಾಲೇಜಗಳಲ್ಲಿ ₹ 10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಗಾಲಯಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಪ್ರಸಕ್ತ ಹಣಕಾಸು ವರ್ಷದ (2026-27) ಬಜೆಟ್ನಲ್ಲಿ ಘೋಷಿಸಿದಂತೆ, ಗ್ರಾಮೀಣ ಪ್ರದೇಶದ ಯುವ ಜನರನ್ನು ಅಗತ್ಯ ಕೌಶಲದ ಜೊತೆ ಉದ್ಯೋಗಶೀಲರನ್ನಾಗಿ ಮಾಡಲು ಕೇಂದ್ರ ಸರ್ಕಾರದ ಎಐ ಮಿಷನ್ ಸಹಭಾಗಿತ್ವದಲ್ಲಿ ʼಎಐʼ ಪ್ರಯೋಗಾಲಯಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಆಯ್ಕೆ ಮಾಡಲಾಗುವ ಶಿಕ್ಷಣ ಸಂಸ್ಥೆ / ಕಾಲೇಜ್ಗಳಲ್ಲಿ ಆಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ಪ್ರಯೋಗಾಲಯಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಕೌಶಲ ಅಭಿವೃದ್ಧಿ ಮತ್ತು ಹೊಸ ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಯುವಜನರು ಇತ್ತೀಚಿನ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲು ಮತ್ತು ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಲು ಇದು ಎಂದು ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಎಐ ಮಿಷನ್ – ಯೋಜನೆಯಡಿ ಪ್ರತಿಯೊಂದು ಪ್ರಯೋಗಾಲಯಕ್ಕೆ 3 ವರ್ಷಗಳ ಅವಧಿಗೆ ₹ 68.98 ಲಕ್ಷ ಮೊತ್ತದ ನೆರವು ನೀಡಲಿದೆ. ಈ ಮೊತ್ತವನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರಕವಾಗಿ ರಾಜ್ಯ ಬಜೆಟ್ನಲ್ಲಿ ಘೋಷಿಸಿರುವಂತೆ ₹ 10 ಕೋಟಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ, ಮೊದಲ ವರ್ಷಕ್ಕೆ ₹ 6.29 ಕೋಟಿ ಬಿಡುಗಡೆ ಮಾಡಲಾಗುತ್ತಿದೆ, ಮೊದಲ ಹಂತದಲ್ಲಿ ಕೃತಕ ಬುದ್ಧಿಮತ್ತೆ ದತ್ತಾಂಶ ಪ್ರಯೋಗಾಲಯಗಳನ್ನು ಸ್ಥಾಪಿಸಲು 23 ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಿರುವುದಕ್ಕೂ ಸರ್ಕಾರದ ಅನುಮೋದನೆ ದೊರೆತಿದೆ ಎಂದೂ ಸಚಿವರು ವಿವರಿಸಿದ್ದಾರೆ.








