ಉತ್ತರ ಪ್ರದೇಶದ ಬಹರೈಚ್ (Bahraich) ಜಿಲ್ಲೆಯ ಪೊಲೀಸರು ಮಹಿಳೆಯೊಬ್ಬರ ಅತ್ತೆ-ಮಾವನ ಮನೆಯ ಐದು ಮಂದಿ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂದೂಕು ತೋರಿಸಿ ಮಾವ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದು, ಇದರ ಬೆನ್ನಲ್ಲೇ ಪತಿ ಫೋನ್ ಮೂಲಕ ‘ತ್ರಿಪಲ್ ತಲಾಖ್’ ಉಚ್ಚರಿಸಿ ತನಗೆ ವಿಚ್ಛೇದನ ನೀಡಿದ್ದಾನೆ ಎಂದು ದೂರಿದ್ದಾರೆ.
ಪೊಲೀಸರ ಪ್ರಕಾರ, ಲಕ್ನೋದ ನಿವಾಸಿಯಾದ ದೂರುದಾರೆ ಮಹಿಳೆ, 2023 ರಲ್ಲಿ ರೂಪೈದಿಹಾ (Rupaideha) ಪಟ್ಟಣದ ಮುಸ್ಲಿಂ ಬಾಗ್ ಪ್ರದೇಶದ ವ್ಯಕ್ತಿಯೊಬ್ಬರನ್ನು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದರು.
ತಮ್ಮ ದೂರಿನಲ್ಲಿ ಮಹಿಳೆಯು, ವಿವಾಹವಾದ ಮೊದಲ ಎರಡು ವರ್ಷಗಳು ಯಾವುದೇ ದೊಡ್ಡ ತೊಂದರೆಗಳಿಲ್ಲದೆ ಕಳೆದಿದ್ದವು ಎಂದು ತಿಳಿಸಿದ್ದಾರೆ. ಆದರೆ, ಆನಂತರ ತನ್ನ ಮಾವ ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ ಎಂದು ಅವರು ಆರೋಪಿಸಿದ್ದಾರೆ.
ಕೆಲಸದ ನಿಮಿತ್ತ ಪತಿ ಮನೆಯಲ್ಲಿ ಇಲ್ಲದ ಸಮಯವನ್ನು ಬಳಸಿಕೊಂಡ ಆರೋಪಿ ಮಾವ, ನಾಡ ಪಿಸ್ತೂಲ್ (country-made pistol) ತೋರಿಸಿ ಬೆದರಿಸಿ, ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಎಫ್ಐಆರ್ನಲ್ಲಿ (FIR) ಉಲ್ಲೇಖಿಸಲಾಗಿದೆ.
ಈ ಘಟನೆಗಳ ಬಗ್ಗೆ ತಾನು ಪತಿಗೆ ತಿಳಿಸಿದಾಗ, ಆತ ತನಗೆ ಬೆದರಿಕೆ ಹಾಕಿದ್ದಲ್ಲದೆ, ಈ ವಿಷಯವನ್ನು ಯಾರಿಗೂ ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿದ್ದ ಎಂದು ಮಹಿಳೆ ಮತ್ತಷ್ಟು ಆರೋಪಿಸಿದ್ದಾರೆ.
ಜನವರಿ 24, 2026 ರಂದು ಇತ್ತೀಚಿನ ಘಟನೆ ನಡೆದಿದ್ದು, ಆ ದಿನವೂ ಮಾವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಅವರು ದೂರಿದ್ದಾರೆ.
ಹಲ್ಲೆ ನಡೆಸಿದ ಅತ್ತೆ-ಮಾವನ ಮನೆಯವರು
ದೂರಿನ ಪ್ರಕಾರ, ಲೈಂಗಿಕ ದೌರ್ಜನ್ಯ ನಡೆದ ತಕ್ಷಣ ಮಹಿಳೆ ಕೂಗಾಡಿದ್ದಾರೆ. ಆ ಸದ್ದನ್ನು ಕೇಳಿ ಅತ್ತೆ, ನಾದಿನಿ ಮತ್ತು ಮೈದುನ ಸ್ಥಳಕ್ಕೆ ಬಂದಿದ್ದಾರೆ. ಆದರೆ, ಅವರು ಮಹಿಳೆಗೆ ಸಹಾಯ ಮಾಡುವ ಬದಲು, ಆಕೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಾದ ನಂತರ ಮಹಿಳೆ ಲಕ್ನೋದಲ್ಲಿರುವ ತನ್ನ ತವರು ಮನೆಗೆ ಮರಳಿದ್ದಾರೆ.
ತಾನು ಮನೆ ಬಿಟ್ಟು ಬಂದ ನಂತರ, ತನ್ನ ಪತಿ ಫೋನ್ ಮೂಲಕ ಮೂರು ಬಾರಿ “ತಲಾಖ್” ಎಂದು ಉಚ್ಚರಿಸಿ ಮದುವೆ ಬಾಂಧವ್ಯವನ್ನು ಕೊನೆಗೊಳಿಸಿದ್ದಾನೆ ಎಂದು ಮಹಿಳೆ ಹೆಚ್ವುವರಿಯಾಗಿ ದೂರಿನಲ್ಲಿ ತಿಳಿಸಿದ್ದಾರೆ.








