ಕೋಲಾರ : ಕೋಲಾರ ಜಿಲ್ಲೆಯಲ್ಲಿ ಸಾಲದ ಹಣದ ಜಗಳಕ್ಕೆ ವೃದ್ಧೆಯೊಬ್ಬರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಾಲ ಕೊಟ್ಟಿದ್ದ ಹಣವನ್ನು ಹಿಂತಿರುಗಿಸುವುದಾಗಿ ನಂಬಿಸಿ, ವೃದ್ಧೆಯನ್ನು ಕರೆಸಿಕೊಂಡು ಹತ್ಯೆ ಮಾಡಿರುವ ಕ್ರೂರ ಕೃತ್ಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ರೆಡ್ಡಮ್ಮ (70) ಕೊಲೆಯಾದ ದುರ್ದೈವಿ ವೃದ್ಧೆ. ಅದೇ ಗ್ರಾಮದ ತಿಮ್ಮರಾಜು ಹಾಗೂ ಮುನಿರಾಜು ಎಂಬುವವರೇ ಈ ಭೀಕರ ಕೊಲೆ ಮಾಡಿದ ಪಾತಕಿಗಳು. ಆರೋಪಿಗಳು ವೃದ್ಧೆ ರೆಡ್ಡಮ್ಮ ಅವರಿಂದ ಸಾಲದ ರೂಪದಲ್ಲಿ ಹಣವನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.
ಆರೋಪಿಗಳಾದ ತಿಮ್ಮರಾಜು ಮತ್ತು ಮುನಿರಾಜು ತಾವು ಪಡೆದಿದ್ದ ಸಾಲದ ಹಣವನ್ನು ವಾಪಸ್ ನೀಡುವುದಾಗಿ ಹೇಳಿ ಮೇ 17 ರಂದು ರೆಡ್ಡಮ್ಮ ಅವರನ್ನು ನಂಬಿಸಿ ಕರೆಸಿಕೊಂಡಿದ್ದಾರೆ. ಹಣ ಸಿಗುತ್ತದೆ ಎಂಬ ಆಸೆಯಿಂದ ಹೋದ ವೃದ್ಧೆಯನ್ನು ಒಂಟಿ ಜಾಗದಲ್ಲಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಸಿಕ್ಕಿಬೀಳಬಾರದೆಂದು ಇಬ್ಬರೂ ತಲೆಮರೆಸಿಕೊಂಡಿದ್ದರು.
ಮೇ 17 ರಿಂದಲೇ ರೆಡ್ಡಮ್ಮ ಅವರು ನಾಪತ್ತೆಯಾಗಿದ್ದರಿಂದ ಕಂಗಾಲಾದ ಕುಟುಂಬಸ್ಥರು ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ವೃದ್ಧೆಯ ಸುಳಿವು ಸಿಗದಿದ್ದಾಗ ಜೂನ್ 1 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ಕೂಡ ವೃದ್ಧೆಯ ಪತ್ತೆಗಾಗಿ ತನಿಖೆ ಆರಂಭಿಸಿದ್ದರು.
ನಾಪತ್ತೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಮೃತ ರೆಡ್ಡಮ್ಮ ಅವರ ಮಗನಿಗೆ ತಾಯಿಯ ನಾಪತ್ತೆಯ ಹಿಂದೆ ಸಾಲ ಪಡೆದಿದ್ದ ಮುನಿರಾಜು ಮತ್ತು ತಿಮ್ಮರಾಜು ಕೈವಾಡ ಇರಬಹುದು ಎಂಬ ಬಲವಾದ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಮಗ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರ ಕಠಿಣ ವಿಚಾರಣೆ ಎದುರಿಸಲಾಗದ ಆರೋಪಿಗಳು ತಾವು ಮಾಡಿದ ಪಾಪಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಬರೋಬ್ಬರಿ 25 ದಿನಗಳ ಹಿಂದೆಯೇ ವೃದ್ಧೆಯನ್ನು ಕೊಲೆ ಮಾಡಿ, ಶವವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಸಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಸದ್ಯ ರಾಯಲಪಾಡು ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅರಣ್ಯ ಇಲಾಖೆ ಹಾಗೂ ನ್ಯಾಯಾಂಗ ಅಧಿಕಾರಿಗಳ ಸಮ್ಮುಖದಲ್ಲಿ ವೃದ್ಧೆಯ ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.








