ಬೆಂಗಳೂರು : ರಾಜ್ಯಾದ್ಯಂತ ಮುಂಗಾರು ಮಾರುತಗಳು ತೀವ್ರಗೊಂಡಿದ್ದು, ವರುಣನ ಅಬ್ಬರ ಜೋರಾಗಿದೆ. ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸುರಿಯಲಿರುವ ಮಳೆಯ ಕುರಿತು ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆಯನ್ನು ನೀಡಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜೂನ್ 15ರವರೆಗೆ ಕರಾವಳಿ ಭಾಗದಲ್ಲಿ ಅತ್ಯಂತ ಜೋರಾದ ಮಳೆಯಾಗುವ ಸಾಧ್ಯತೆಯಿದೆ. ಇನ್ನು ರಾಜಧಾನಿ ಬೆಂಗಳೂರಿನ ನಿವಾಸಿಗಳಿಗೂ ಮುಂದಿನ 48 ಗಂಟೆಗಳ ಕಾಲ ಕೆಲವು ಪ್ರದೇಶಗಳಲ್ಲಿ ಮಳೆಯ ಸಿಂಚನವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಒಟ್ಟು 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ. ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ದಕ್ಷಿಣ ಒಳನಾಡು (ಮಲೆನಾಡು) ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಿಡಿಲು ಮಿಂಚಿನ ಜೊತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಹಾಗೂ ನದಿಗಳು ಮೈದುಂಬಿ ಹರಿಯುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ನದಿ ತೀರದ ನಿವಾಸಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ.








