ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ನಿರ್ದಿಷ್ಟ ಅಳತೆಯ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನ್ಭವ / ಅಧಿಭೋಗ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ಒನ್-ಟೈಮ್ ವಿನಾಯಿತಿ ನೀಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಗ್ರಾಮೀಣ ಭಾಗದ ಜನರಿಗೆ ಸಕಾಲದಲ್ಲಿ ಸೇವೆ ಒದಗಿಸುವ ಮತ್ತು ವಿದ್ಯುತ್ ಸಂಪರ್ಕ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಯಾರಿಗೆ ಅನ್ವಯ? ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2400 ಚದರ ಅಡಿವರೆಗೆ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಈ ನಿಯಮ ಅನ್ವಯವಾಗಲಿದೆ.
ಕಟ್ಟಡದ ಮಿತಿ: ನೆಲಮಹಡಿ + 3 ಅಂತಸ್ತುಗಳ (G+3) ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು (Stilt+4) ಹೊಂದಿರುವ, ಸಂಪೂರ್ಣವಾಗಿ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಈ ವಿನಾಯಿತಿ ಸಿಗಲಿದೆ.
ಅರ್ಜಿ ಸಲ್ಲಿಸಲು ಕರಾರು: 31-05-2026ರ ಒಳಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಮಾತ್ರ ಈ ‘ಒಂದು ಬಾರಿಯ ವಿನಾಯಿತಿ’ (One-time exemption) ಅನ್ವಯವಾಗುತ್ತದೆ.
ವಿದ್ಯುತ್ ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ:
ಕಟ್ಟಡವು ಸಂಪೂರ್ಣವಾಗಿ ಪೂರ್ಣಗೊಂಡಿರುವುದನ್ನು ಮತ್ತು ನಿಯಮಾವಳಿಗಳ ಪ್ರಕಾರ ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳು (Escoms) ಸ್ಥಳ ಪರಿಶೀಲನೆ ನಡೆಸಬೇಕು. ಕಟ್ಟಡದ ಭಾವಚಿತ್ರವನ್ನು ತೆಗೆದು, ದಾಖಲಿಸಿಕೊಂಡ ನಂತರವಷ್ಟೇ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಆದೇಶವನ್ನು ಹೊರಡಿಸಲಾಗಿದ್ದು, ಇದರಿಂದಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡ ಸಾವಿರಾರು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.









