ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಸರಣಿಯ ಸಿದ್ಧತೆಯ ಭಾಗವಾಗಿರುವ, ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬೆನ್ನಲ್ಲೇ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದ ಹೊರಬಿದ್ದಿದ್ದಾರೆ.
ಬಿಸಿಸಿಐ (BCCI) ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯ ಸದ್ಯ ಕ್ವಾಡ್ರಿಸೆಪ್ಸ್ (ತೊಡೆಯ ಸ್ನಾಯು) ಗಾಯದಿಂದ ಬಳಲುತ್ತಿದ್ದು, ಇದರಿಂದ ಗುಣಮುಖರಾಗಲು ಕನಿಷ್ಠ ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾಗ ಪಾಂಡ್ಯ ಬೆನ್ನುನೋವಿಗೆ ತುತ್ತಾಗಿದ್ದರು. ಈ ಕಾರಣದಿಂದಾಗಿ ಅವರು ಲೀಗ್ ಹಂತದ ಕೊನೆಯ ಪಂದ್ಯಗಳಿಂದ ಹೊರಗುಳಿದು, ಟೂರ್ನಿಯಲ್ಲಿ ಕೇವಲ 10 ಪಂದ್ಯಗಳನ್ನು ಮಾತ್ರ ಆಡಿದ್ದರು.
ಬೆನ್ನುನೋವಿನ ಸಮಸ್ಯೆಯಿಂದ ಚೇತರಿಸಿಕೊಂಡು ಫಿಟ್ನೆಸ್ ಪ್ರಮಾಣಪತ್ರ ಪಡೆಯಲು ಪಾಂಡ್ಯ ಬೆಂಗಳೂರಿನ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಗೆ ಆಗಮಿಸಿದ್ದರು. ಆದರೆ, ಅಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯ ವೇಳೆ ಅವರು ಸತತ 10 ಓವರ್ ಗಳ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಿದ ಪರಿಣಾಮವಾಗಿ ಈ ಹೊಸ ಗಾಯದ ಸಮಸ್ಯೆ (ಕ್ವಾಡ್ರಿಸೆಪ್ಸ್ ಗಾಯ) ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
“ಅವರು ಚೇತರಿಸಿಕೊಳ್ಳಲು ಮೂರು ವಾರಗಳ ಸಮಯ ಬೇಕಿರುವುದರಿಂದ, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಆಡುವ ಯಾವುದೇ ಸಾಧ್ಯತೆಗಳಿಲ್ಲ. ಅವರ ಪುನಶ್ಚೇತನ (Rehabilitation) ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಹಿರಿಯ ಆಟಗಾರರ ಗಾಯದ ಸಮಸ್ಯೆ:
ಹಾರ್ದಿಕ್ ಪಾಂಡ್ಯ ಅವರ ಈ ಗಾಯವು ಭಾರತ ತಂಡದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದ ವಿರಾಟ್ ಕೊಹ್ಲಿ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಇದರೊಂದಿಗೆ, ಕಳೆದ ಕೆಲವು ತಿಂಗಳುಗಳಿಂದ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಲಭ್ಯತೆಯ ಮೇಲೆಯೂ ಸದ್ಯ ತೂಗುಗತ್ತಿ ನೇತಾಡುತ್ತಿದೆ.
ಪ್ರಸ್ತುತ ವಿರಾಟ್ ಕೊಹ್ಲಿ ಅವರ ಜಾಗಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರ ಬದಲಿ ಆಟಗಾರ ಯಾರೆಂಬುದನ್ನು ಬಿಸಿಸಿಐ ಇನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯವು ಶನಿವಾರ ಧರ್ಮಶಾಲಾದಲ್ಲಿ ಆರಂಭವಾಗಲಿದ್ದು, ಉಳಿದ ಎರಡು ಪಂದ್ಯಗಳು ಜೂನ್ 17 ಮತ್ತು 20 ರಂದು ಕ್ರಮವಾಗಿ ಲಕ್ನೋ ಮತ್ತು ಚೆನ್ನೈನಲ್ಲಿ ನಡೆಯಲಿವೆ.








