ಧಾರವಾಡ : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (ಕವಿವಿ) ಪ್ರೊಫೆಸರ್ ಒಬ್ಬರು ವಿದ್ಯಾರ್ಥಿನಿಯ ಜೊತೆ ಅಕ್ರಮ ಸಂಬಂಧ ಹೊಂದಿ, ಆಕೆ ಹೋದ ನಂತರ ಮತ್ತೊಬ್ಬ ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ದೇವರಾಜ ತಂಗುದೊರೈ ಎಂಬುವವರ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಪ್ರೊಫೆಸರ್ನ ಈ ವರ್ತನೆಯಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಆರೋಪಿತ ಪ್ರೊಫೆಸರ್ ದೇವರಾಜ ತಂಗುದೊರೈ, ತನ್ನ ಬಳಿ ಪಿಎಚ್ಡಿ ಮಾಡಲು ಬಂದಿದ್ದ ವಿಜಯಪುರ ಮೂಲದ ವಿದ್ಯಾರ್ಥಿನಿಯೊಬ್ಬರ ಜೊತೆ ಕಳೆದ ಕೆಲವು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ವಿಷಯವು ವಿದ್ಯಾರ್ಥಿನಿಯ ಮನೆಯವರಿಗೆ ತಿಳಿಯುತ್ತಿದ್ದಂತೆ, ಅವರು ಆಕೆಯ ಪಿಎಚ್ಡಿಯನ್ನು ಅರ್ಧಕ್ಕೆ ನಿಲ್ಲಿಸಿ ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿನಿ ತನ್ನಿಂದ ದೂರಾದ ಬಳಿಕ ಪ್ರೊಫೆಸರ್ ಮಾನಸಿಕವಾಗಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ಹೇಳಲಾಗಿದೆ.
ಇದೇ ವೇಳೆ, ವಿಜಯಪುರ ಮೂಲದ ವೇದವ್ಯಾಸ್ ಚೌಹಾಣ್ ಎಂಬ ವಿದ್ಯಾರ್ಥಿ ಅದೇ ಪ್ರೊಫೆಸರ್ ಬಳಿ ಪಿಎಚ್ಡಿ ಗೈಡ್ಶಿಪ್ ಪಡೆಯಲು ಹೋಗಿದ್ದರು. ಆರಂಭದಲ್ಲಿ ವೇದವ್ಯಾಸ್ಗೆ ಮಾರ್ಗದರ್ಶನ ನೀಡಿದ್ದ ಪ್ರೊ. ದೇವರಾಜ್, ಪಿಎಚ್ಡಿ ಮುಗಿಯುವ ಹಂತಕ್ಕೆ ಬಂದಾಗ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದಾನೆ. ತನ್ನನ್ನು ಬಿಟ್ಟುಹೋದ ವಿಜಯಪುರ ಮೂಲದ ಆ ಹಳೆಯ ವಿದ್ಯಾರ್ಥಿನಿಯನ್ನು ಮರಳಿ ಕರೆಯಿಸುವಂತೆ ವೇದವ್ಯಾಸ್ ಮೇಲೆ ತೀವ್ರ ಒತ್ತಡ ಹೇರಲು ಮತ್ತು ಕಿರುಕುಳ ನೀಡಲು ಆರಂಭಿಸಿದ್ದಾನೆ.
ಒಂದು ವೇಳೆ ಆಕೆಯನ್ನು ಮರಳಿ ಕರೆಸಿಕೊಟ್ಟರೆ ಮಾತ್ರ ಪಿಎಚ್ಡಿ ಪೂರ್ಣ ಮಾಡಿಕೊಡುವುದಾಗಿ, ಇಲ್ಲದಿದ್ದರೆ ಇಲ್ಲ ಎಂದು ಪ್ರೊಫೆಸರ್ ವಿದ್ಯಾರ್ಥಿ ವೇದವ್ಯಾಸ್ಗೆ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಅಷ್ಟೇ ಅಲ್ಲದೆ, ತಾನು ಆ ವಿದ್ಯಾರ್ಥಿನಿಯೊಂದಿಗೆ ಕಳೆದ ದಿನಗಳು ಮತ್ತು ಹೊಂದಿದ್ದ ಸಂಬಂಧದ ಕುರಿತು ವೇದವ್ಯಾಸ್ ಬಳಿ ವಿವರವಾಗಿ ಮಾತನಾಡಿದ್ದಾನೆ. ಈ ಮಾತುಕತೆಗೆ ಸಂಬಂಧಿಸಿದ ಆಡಿಯೋ ಸಂಭಾಷಣೆ ಹಾಗೂ ಕೆಲವು ಖಾಸಗಿ ಫೋಟೋಗಳು ಇದೀಗ ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಪ್ರೊ. ದೇವರಾಜ ತಂಗುದೊರೈ ತನ್ನದೇ ವಿಭಾಗದ ವಿದ್ಯಾರ್ಥಿನಿಯೊಂದಿಗೆ ತೆಗೆಸಿಕೊಂಡಿದ್ದ ಕೆಲವು ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಹಂಚಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆಕೆಗೆ ಮೂರು ಬಾರಿ ಗರ್ಭಪಾತ (ಅಬಾಷನ್) ಮಾಡಿಸಿದ್ದಾನೆ ಎಂಬ ಆಘಾತಕಾರಿ ಆರೋಪವೂ ಕೇಳಿಬಂದಿದೆ. ಪ್ರೊಫೆಸರ್ನ ಈ ಕಿರುಕುಳ ಮತ್ತು ವರ್ತನೆಯಿಂದ ಕಂಗಾಲಾದ ವಿದ್ಯಾರ್ಥಿ ವೇದವ್ಯಾಸ್, ಅಂತಿಮವಾಗಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಗೆ ದೂರು ನೀಡಿದ್ದಾರೆ.
ವಿದ್ಯಾ ಮಂದಿರದಲ್ಲಿ ಇಂತಹ ಅನೈತಿಕ ಹಾಗೂ ಲೈಂಗಿಕ ಕಿರುಕುಳದ ಘಟನೆ ನಡೆದಿರುವುದಕ್ಕೆ ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಮತ್ತು ನೈತಿಕತೆ ಮರೆತು ವರ್ತಿಸುತ್ತಿರುವ ಪ್ರೊ. ದೇವರಾಜ ತಂಗುದೊರೈ ಮೇಲೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಬೇಕು, ಆತನನ್ನು ಸೇವೆಯಿಂದ ಅಮಾನತು ಮಾಡಬೇಕು ಮತ್ತು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕವಿವಿ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ತೀವ್ರವಾಗಿ ಒತ್ತಾಯಿಸಿದ್ದಾರೆ.








