ಪುಣೆ: ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶದ ದೇವಾಲಯವೊಂದರ ಆವರಣದಲ್ಲಿ ನಡೆದ ಜಾತ್ರೆಯಲ್ಲಿ ಖರೀದಿಸಿದ ಹಾಸಿಗೆಯ ಹೊದಿಕೆಯ (bedsheet) ಮೇಲೆ ‘ಮೇಡ್ ಇನ್ ಪಾಕಿಸ್ತಾನ’ ಎಂಬ ಟ್ಯಾಗ್ ಪತ್ತೆಯಾಗಿದೆ. ಇದನ್ನು ಒಗೆದ ನಂತರವೇ ಲೇಬಲ್ ಕಾಣಿಸಿಕೊಂಡಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದು, ಈ ಘಟನೆಯು ತನಿಖೆಗೆ ಕಾರಣವಾಗಿದೆ.
ಪಿಂಪ್ರಿ-ಚಿಂಚ್‌ವಾಡ್‌ನ ಮೋರ್ಯ ಗೋಸಾವಿ ದೇವಾಲಯದ ಸಮೀಪ ನಡೆದ ಸಂಕಷ್ಟ ಚತುರ್ಥಿ ಮೇಳದಲ್ಲಿ ಮಹಿಳೆಯೊಬ್ಬರು ಈ ಹಾಸಿಗೆ ಹೊದಿಕೆಯನ್ನು ಖರೀದಿಸಿದ್ದರು. ಖರೀದಿಸುವ ಸಮಯದಲ್ಲಿ ಉತ್ಪನ್ನದ ಬಗ್ಗೆ ಯಾವುದೇ ಅನುಮಾನ ಉಂಟಾಗಿರಲಿಲ್ಲ. ಆದರೆ, ಮನೆಗೆ ತಂದು ಒಗೆದ ನಂತರ ಅದರ ಮೇಲೆ ‘ಮೇಡ್ ಇನ್ ಪಾಕಿಸ್ತಾನ’ ಎಂದು ಬರೆದಿರುವ ಲೇಬಲ್ ಇರುವುದು ಕಂಡುಬಂದಿದೆ.
ಈ ವಿಷಯದ ಬಗ್ಗೆ ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ತಯಾರಾದ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಗೆ ಹೇಗೆ ಬಂದವು ಎಂದು ಪ್ರಶ್ನಿಸಿರುವ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಹಾಸಿಗೆ ಹೊದಿಕೆಯ ಮೂಲ ಯಾವುದು ಮತ್ತು ಯಾವ ಸರಬರಾಜು ಜಾಲದ ಮೂಲಕ ಅದು ಮಾರಾಟವಾಗಿದೆ ಎಂಬುದನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಈ ತನಿಖೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳುವಂತೆ ಪೊಲೀಸರು ಪಿಂಪ್ರಿ-ಚಿಂಚ್‌ವಾಡ್ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.
ಬುಧವಾರ ಸಂಕಷ್ಟ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಭಕ್ತರ ದಟ್ಟಣೆ ಹೆಚ್ಚಿದ್ದಾಗ ಈ ಹಾಸಿಗೆ ಹೊದಿಕೆಯನ್ನು ಖರೀದಿಸಲಾಗಿತ್ತು ಎಂದು ವರದಿಯಾಗಿದೆ.
ಈ ಉತ್ಪನ್ನವು ಎಲ್ಲಿಂದ ಬಂದಿದೆ, ಮಾರಾಟಗಾರರಿಗೆ ಅದನ್ನು ಪೂರೈಕೆ ಮಾಡಿದವರು ಯಾರು ಮತ್ತು ಇಂತಹ ಉತ್ಪನ್ನಗಳು ಇನ್ನೂ ಬೇರೆ ಕಡೆ ಮಾರಾಟವಾಗುತ್ತಿವೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ’ ಲೇಬಲ್ ಹೊಂದಿದ್ದ ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿತ್ತು. ಸದ್ಯ ಈ ಪುಣೆ ಪ್ರಕರಣದ ಮುಂದಿನ ಕ್ರಮಗಳು ತನಿಖೆಯ ವರದಿಯನ್ನು ಅವಲಂಬಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








