ನವದೆಹಲಿ: ಎರಡು ನದಿ ಯೋಜನೆಗಳ ಕುರಿತು ಪಾಕಿಸ್ತಾನ ವ್ಯಕ್ತಪಡಿಸಿರುವ ಟೀಕೆಗಳನ್ನು ತಳ್ಳಿಹಾಕಿರುವ ಭಾರತ, ಸಿಂಧೂ ನದಿ ನೀರು ಒಪ್ಪಂದದ (IWT) ಕುರಿತಾದ ತನ್ನ ನಿಲುವನ್ನು ಶುಕ್ರವಾರ ಪುನರುಚ್ಚರಿಸಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಈ ಒಪ್ಪಂದವು ಅಮಾನತಿನಲ್ಲಿಯೇ (abeyance) ಮುಂದುವರಿಯುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಚೀನಾಬ್-ಬಿಯಾಸ್ ಲಿಂಕ್ ಟನಲ್ ಯೋಜನೆ ಮತ್ತು ಸಲಾಲ್ ಅಣೆಕಟ್ಟಿನ ಜಲಾಶಯದಿಂದ ಹೂಳು ತೆಗೆಯುವ ಭಾರತದ ಯೋಜನೆಗಳ ಮೂಲಕ ಭಾರತವು “ನೀರನ್ನು ಅಸ್ತ್ರವಾಗಿ ಬಳಸುತ್ತಿದೆ” ಎಂಬ ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯೆಯಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಹೇಳಿಕೆ ನೀಡಿದೆ.
ನವದೆಹಲಿಯಲ್ಲಿ ನಡೆದ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಾವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದೇವೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಇದು ಅಮಾನತಿನಲ್ಲಿಯೇ ಇರುತ್ತದೆ” ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಿಸ್ ರಾಯಭಾರಿ ಭೇಟಿ ನೀಡಿದ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, “ಸ್ವಿಸ್ ರಾಯಭಾರಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ಹಲವು ಸಭೆಗಳನ್ನು ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಸ್ವಿಸ್ ರಾಯಭಾರಿ ಅಥವಾ ಯಾವುದೇ ಇತರ ದೇಶದ ರಾಯಭಾರಿ ಅಲ್ಲಿಗೆ ಭೇಟಿ ನೀಡಲು ಸ್ವತಂತ್ರರಾಗಿದ್ದಾರೆ” ಎಂದು ಖಡಕ್ ಆಗಿ ಉತ್ತರಿಸಿದರು.
ಅಕ್ರಮ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ತಿರಸ್ಕಾರ:
ಕಳೆದ ತಿಂಗಳು, ಸಿಂಧೂ ನದಿ ನೀರು ಒಪ್ಪಂದದ ಅಡಿಯಲ್ಲಿ ರಚಿಸಲಾಗಿದೆ ಎಂದು ಹೇಳಿಕೊಳ್ಳುವ “ಅಕ್ರಮವಾಗಿ ರಚಿತವಾದ” ಮಧ್ಯಸ್ಥಿಕೆ ನ್ಯಾಯಾಲಯದ (CoA) ಇತ್ತೀಚಿನ ತೀರ್ಪನ್ನು ಭಾರತವು “ಶೂನ್ಯ ಮತ್ತು ಅಮಾನ್ಯ” (null and void) ಎಂದು ತಿರಸ್ಕರಿಸಿದೆ.
”ಈ ಅಕ್ರಮ ಮಧ್ಯಸ್ಥಿಕೆ ನ್ಯಾಯಾಲಯವು ಮೇ 15, 2026 ರಂದು ಸಿಂಧೂ ನದಿ ನೀರು ಒಪ್ಪಂದದ ಸಾಮಾನ್ಯ ಅರ್ಥೈಸುವಿಕೆಯ ಕುರಿತಾದ ತೀರ್ಪಿಗೆ ಪೂರಕವಾಗಿ ‘ಗರಿಷ್ಠ ಪೊಂಡೇಜ್’ (maximum pondage) ಕುರಿತಾದ ತೀರ್ಪನ್ನು ನೀಡಿದೆ.
ಭಾರತವು ಈ ಹಿಂದಿನಂತೆ ಈಗಲೂ ಅಕ್ರಮವಾಗಿ ರಚಿತವಾದ CoA ನ ಎಲ್ಲಾ ತೀರ್ಪುಗಳನ್ನು ದೃಢವಾಗಿ ತಿರಸ್ಕರಿಸುತ್ತದೆ. ಭಾರತವು ಈ ನ್ಯಾಯಾಲಯದ ರಚನೆಯನ್ನು ಎಂದಿಗೂ ಗುರುತಿಸಿಲ್ಲ. ಅದರ ಯಾವುದೇ ನಡವಳಿಕೆಗಳು ಅಥವಾ ನಿರ್ಧಾರಗಳು ಶೂನ್ಯ ಮತ್ತು ಅಮಾನ್ಯವಾಗಿವೆ,” ಎಂದು ವಕ್ತಾರರು ತಿಳಿಸಿದ್ದಾರೆ.
1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕಳೆದ ವರ್ಷ ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಸಾರ್ವಭೌಮ ರಾಷ್ಟ್ರವಾಗಿ ತನ್ನ ಹಕ್ಕುಗಳನ್ನು ಚಲಾಯಿಸಿ, ಪಾಕಿಸ್ತಾನವು ಭಯೋತ್ಪಾದನೆಗೆ ನೀಡುವ ಬೆಂಬಲವನ್ನು ನಂಬಲರ್ಹವಾಗಿ ಮತ್ತು ಹಿಂಪಡೆಯಲಾಗದಂತೆ ನಿಲ್ಲಿಸುವವರೆಗೆ ಈ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ.
ಒಪ್ಪಂದ ಅಮಾನತಿನಲ್ಲಿರುವವರೆಗೆ, ಭಾರತವು ಒಪ್ಪಂದದ ಅಡಿಯಲ್ಲಿ ಯಾವುದೇ ಬಾಧ್ಯತೆಗಳನ್ನು ಪೂರೈಸಲು ಬದ್ಧವಾಗಿಲ್ಲ. ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಈ ಅಕ್ರಮ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ, ಭಾರತದ ಸಾರ್ವಭೌಮ ಹಕ್ಕುಗಳ ಚಟುವಟಿಕೆಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವ ಯಾವುದೇ ಅಧಿಕಾರವಿಲ್ಲ ಎಂದು ಕಳೆದ ವರ್ಷವೇ ಭಾರತ ಸ್ಪಷ್ಟಪಡಿಸಿತ್ತು.
ಪಾಕಿಸ್ತಾನವು ಇಂತಹ ಕೃತಕ ಮಧ್ಯಸ್ಥಿಕೆ ಕಾರ್ಯವಿಧಾನಗಳನ್ನು ಆಶ್ರಯಿಸುವುದು, ಜಾಗತಿಕ ಭಯೋತ್ಪಾದನೆಯ ಕೇಂದ್ರವಾಗಿರುವ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನ ಎಂದು ಭಾರತ ಬಲವಾಗಿ ಟೀಕಿಸಿದೆ.








