ನವದೆಹಲಿ: ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಒಂದು ಅತ್ಯಂತ ಪ್ರಮುಖ ಹಾಗೂ ಮಹತ್ವದ ಆದೇಶವನ್ನು ಹೊರಡಿಸಿದೆ. ಹುದ್ದೆಗೆ ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಆ ಉದ್ಯೋಗ ಸಿಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಡಿಮೆ ವಿದ್ಯಾಭ್ಯಾಸದ ಹಿನ್ನೆಲೆಯುಳ್ಳವರಿಗಾಗಿ ಮೀಸಲಿಟ್ಟ ಕೆಲಸಗಳನ್ನು, ಹೆಚ್ಚು ಓದಿದವರು ಗಿಟ್ಟಿಸಿಕೊಳ್ಳುವುದರಿಂದ ನಿಜವಾದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಬ್ಯಾಂಕ್ ಒಂದರ ತಾತ್ಕಾಲಿಕ ಅಟೆಂಡರ್ ಹುದ್ದೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಮರುನೇಮಕಾತಿ ಆದೇಶವನ್ನು ಸುಪ್ರೀಂ ಕೋರ್‌್ಟನ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾಮುಲ್ಲಾ ಹಾಗೂ ಆರ್. ಮಹದೇವನ್ ಅವರಿದ್ದ ನ್ಯಾಯಪೀಠವು ರದ್ದುಗೊಳಿಸಿದೆ.
ಸದರಿ ಹುದ್ದೆಗೆ ಗರಿಷ್ಠ ಹತ್ತನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಮಾತ್ರ ಅರ್ಹತೆ ಎಂದು ನಿಗದಿಪಡಿಸಲಾಗಿತ್ತು. ಆದರೆ, ಹೈಕೋರ್ಟ್ ಈ ಅಂಶವನ್ನು ಗಮನಿಸದೆ ತೀರ್ಪು ನೀಡಿತ್ತು ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಉದ್ಯೋಗ ಗಿಟ್ಟಿಸಿಕೊಂಡ ವ್ಯಕ್ತಿಯು ತಾನು ಪದವೀಧರ ಎಂಬ ಸತ್ಯವನ್ನು ಮುಚ್ಚಿಟ್ಟು ಈ ಕೆಲಸ ಪಡೆದುಕೊಂಡಿದ್ದ.
ಜೀವನದ ಕಠಿಣ ಸಂದರ್ಭಗಳಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾದ ಜನರಿಗೆ ಇಂತಹ ಸಣ್ಣ ಉದ್ಯೋಗಗಳ ಮೂಲಕ ಬದುಕಿನ ದಾರಿ ಕಲ್ಪಿಸಿಕೊಡುವುದು ಸರ್ಕಾರದ ಉದ್ದೇಶವಾಗಿರುತ್ತದೆ. ಹಾಗಾಗಿ ಇಂತಹ ಹುದ್ದೆಗಳಿಗೆ ಗರಿಷ್ಠ ಶೈಕ್ಷಣಿಕ ಮಿತಿಯನ್ನು ನಿಗದಿಪಡಿಸುವುದು ಸಂಪೂರ್ಣ ನ್ಯಾಯಸಮ್ಮತವಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.








