ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸುವ ಮತ್ತೊಂದು ಮಹತ್ವದ ವಿದ್ಯಮಾನ ಜರುಗುತ್ತಿದ್ದು, ಇಂದು ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ಅವರು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾದ ತಕ್ಷಣವೇ ಖಾದರ್ ಅವರು ತಮ್ಮ ಸ್ಪೀಕರ್ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ.
ನಿಯಮಾವಳಿಗಳ ಪ್ರಕಾರ, ಯು.ಟಿ. ಖಾದರ್ ಅವರು ಇಂದು ಮಧ್ಯಾಹ್ನದ ವೇಳೆಗೆ ವಿಧಾನಸಭೆಯ ಉಪಸಭಾಪತಿಗಳಿಗೆ (ಡೆಪ್ಯುಟಿ ಸ್ಪೀಕರ್) ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಸಿಎಂ ಪ್ರಮಾಣವಚನ ಬೆನ್ನಲ್ಲೇ ಸಂಪುಟ ವಿಸ್ತರಣೆ ಕಸರತ್ತು ಚುರುಕಾಗಿದ್ದು, ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಸುಮಾರು 12 ರಿಂದ 13 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕ ಯು.ಟಿ. ಖಾದರ್ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎನ್ನಲಾಗುತ್ತಿದ್ದು, ಇದಕ್ಕಾಗಿ ಅವರು ತಮ್ಮ ಸ್ಪೀಕರ್ ಸ್ಥಾನಕ್ಕೆ ಗುಡ್ಬೈ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.








