ಕೊಲ್ಕತ್ತಾ: ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಮಾನ್ಯ ವ್ಯಕ್ತಿಯೂ ಅಸಾಧಾರಣ ಸಾಧನೆ ಮಾಡಬಹುದು ಎಂಬುದಕ್ಕೆ ಪಶ್ಚಿಮ ಬಂಗಾಳದ ಈ ಘಟನೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವಾರಗಳು ಕಳೆಯುತ್ತಲೇ ಮೊದಲ ಬಾರಿ ಸಚಿವ ಸಂಪುಟವನ್ನು ವಿಸ್ತರಿಸಲಾಗಿದೆ. ಈ ವಿಸ್ತರಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಇತ್ತೀಚೆಗಷ್ಟೇ ಶಾಸಕಿಯಾಗಿ ಆಯ್ಕೆಯಾಗಿದ್ದ ಕಡು ಬಡತನದ ಹಿನ್ನೆಲೆಯ ಕಲಿತಾ ಮಾಝಿ! ಒಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆದು ಬದುಕು ಸಾಗಿಸುತ್ತಿದ್ದ ಇವರು, ಇಂದು ರಾಜ್ಯದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ಸೋಮವಾರ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರಾದ ಆರ್.ಎನ್. ರವಿ ಅವರು ಹೊಸದಾಗಿ ಆಯ್ಕೆಯಾದ 35 ಶಾಸಕರಿಗೆ ಸಚಿವರಾಗಿ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇದರಲ್ಲಿ ಕೆಲವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕರೆ, ಇನ್ನು ಕೆಲವರಿಗೆ ರಾಜ್ಯ ಸಚಿವ ಸ್ಥಾನ ಒಲಿದಿದೆ. ಈ ಹೊಸ ಸೇರ್ಪಡೆಯೊಂದಿಗೆ ಸುವೇಂದು ಸರ್ಕಾರದ ಒಟ್ಟು ಸಚಿವರ ಸಂಖ್ಯೆ ಈಗ 41ಕ್ಕೆ ತಲುಪಿದೆ.
ಸೋಲಿನಿಂದ ಸಚಿವ ಸ್ಥಾನದವರೆಗೆ ಕಲಿತಾ ಮಾಝಿ ಜರ್ನಿ:
ಪೂರ್ವ ಬರ್ಧಮಾನ್ ಜಿಲ್ಲೆಯ ಆಸುಗ್ರಾಮ ಕ್ಷೇತ್ರದ ಶಾಸಕಿಯಾಗಿರುವ ಕಲಿತಾ ಮಾಝಿ ಅವರ ರಾಜಕೀಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಪತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರೆ, ಇವರು ಜನರ ಮನೆಗಳಲ್ಲಿ ಕೆಲಸ ಮಾಡಿಕೊಂಡು ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಇವರ ಕಷ್ಟದ ಜೀವನ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿದ ಬಿಜೆಪಿ, ಕಳೆದ 2021ರ ಚುನಾವಣೆಯಲ್ಲೇ ಇವರಿಗೆ ಮೊದಲ ಬಾರಿಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಆದರೆ ಆ ಚುನಾವಣೆಯಲ್ಲಿ ಅವರಿಗೆ ಜಯ ಸಿಗಲಿಲ್ಲ.
ಹಾಗಿದ್ದರೂ ಧೃತಿಗೆಡದ ಕಲಿತಾ, ಜನರೊಂದಿಗಿನ ಒಡನಾಟವನ್ನು ಮುಂದುವರಿಸಿದ್ದರು. ಪಕ್ಷವು ಇವರ ಮೇಲಿನ ನಂಬಿಕೆಯನ್ನು ಉಳಿಸಿಕೊಂಡು 2026ರ ಚುನಾವಣೆಯಲ್ಲೂ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. ಈ ಬಾರಿ ಮತದಾರರು ಕಲಿತಾ ಅವರ ಕೈಹಿಡಿದರು. ತಮ್ಮ ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ವಿರುದ್ಧ ಭರ್ಜರಿ 12,535 ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಅವರಿಗೆ, ಈಗ ನೇರವಾಗಿ ಸಚಿವ ಸಂಪುಟದಲ್ಲೇ ಸ್ಥಾನ ಕಲ್ಪಿಸಲಾಗಿದೆ.
ಯಾವುದೇ ಗಾಡ್‌ಫಾದರ್ ಇಲ್ಲದೆ, ಕೇವಲ ಸ್ವಂತ ಪರಿಶ್ರಮ ಮತ್ತು ಸರಳತೆಯಿಂದಲೇ ಶಾಸಕಿಯಾಗಿ, ಈಗ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕಲಿತಾ ಮಾಝಿ ಅವರ ಕಥೆ ಇಡೀ ದೇಶದ ಜನರಿಗೆ ಸ್ಫೂರ್ತಿಯಾಗಿದೆ.








