ನವದೆಹಲಿ: ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ, ಸಂಸದೀಯ ಸ್ಥಾಯಿ ಸಮಿತಿಯು (ಶಿಕ್ಷಣ, ಮಹಿಳಾ, ಮಕ್ಕಳ, ಯುವ ಮತ್ತು ಕ್ರೀಡಾ) ಇಂದು ಮತ್ತು ನಾಳೆ ಮಹತ್ವದ ಸಭೆಗಳನ್ನು ಕರೆದಿದೆ.
ಇಂದಿನ ಸಭೆ (ಜೂನ್ 1, ಬೆಳಗ್ಗೆ 11 ಗಂಟೆ): ಪೆನ್-ಅಂಡ್-ಪೇಪರ್ (ಓಎಂಆರ್) ಪರೀಕ್ಷಾ ವಿಧಾನ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡುವಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ, ನೀಟ್-ಯುಜಿ 2026 ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಕಾರ್ಯವೈಖರಿಯ ಬಗ್ಗೆ ಸಮಿತಿ ಪರಿಶೀಲನೆ ನಡೆಸಲಿದೆ.
ನಾಳೆಯ ಸಭೆ (ಜೂನ್ 2, ಬೆಳಗ್ಗೆ 11 ಗಂಟೆ): 12ನೇ ತರಗತಿಯ ಸಿಬಿಎಸ್ಇ (CBSE) ಪರೀಕ್ಷೆಗಳಲ್ಲಿ ಬಳಸಲಾಗುವ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆ ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಅಲ್ಲದೆ, 9 ಮತ್ತು 10ನೇ ತರಗತಿಗಳಲ್ಲಿ ‘ತ್ರಿಭಾಷಾ ಸೂತ್ರ’ವನ್ನು ಅನ್ವಯಿಸುವ ಕುರಿತೂ ಸಮಿತಿ ಚಿಂತನೆ ನಡೆಸಲಿದೆ.
ಈ ಬಾರಿಯ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐ (CBI) ಕೈಗೆತ್ತಿಕೊಂಡಿದ್ದು, ಈವರೆಗೆ 13 ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಲಾತೂರ್‌ನ ವೈದ್ಯರೊಬ್ಬರು ಮತ್ತು ಪುಣೆ ಮೂಲದ ಕೋಚಿಂಗ್ ಇನ್ಸ್ಟಿಟ್ಯೂಟ್‌ನ ಬೋಧಕರೊಬ್ಬರು ಸೇರಿದ್ದಾರೆ.
ಸೋರಿಕೆಯಾದ ಕಾರಣ ರದ್ದುಗೊಂಡಿದ್ದ ನೀಟ್-ಯುಜಿ ಪರೀಕ್ಷೆಯನ್ನು ಜೂನ್ 21ಕ್ಕೆ ಮರುನಿಗದಿಪಡಿಸಲಾಗಿದೆ.
ಶುಕ್ರವಾರ ನಡೆದ ಸಭೆಯಲ್ಲಿ, ಸಂಸದೀಯ ಸಮಿತಿಯ ಸದಸ್ಯರು ಎನ್‌ಟಿಎ ನಡೆಸುವ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ.








