ನವದೆಹಲಿ: 2025ರ ಏಪ್ರಿಲ್ 22 ರಂದು ಪಹಲ್ಗಾಂನಲ್ಲಿ ನಡೆದ ಭೀಕರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದರು. ಈ ದಾಳಿಕೋರರು ಬಳಸಿದ್ದ ಎರಡು ಮೊಬೈಲ್ ಫೋನ್ಗಳ ಪೈಕಿ ಒಂದು ಫೋನ್, ಪಾಕಿಸ್ತಾನದ ಕರಾಚಿಯಲ್ಲಿರುವ ‘ಫೈಸಲ್ ಬ್ಯಾಂಕ್’ (Faysal Bank) ಆರ್ಥಿಕ ನೆರವಿನೊಂದಿಗೆ ಆಮದು ಮಾಡಿಕೊಳ್ಳಲಾದ ಸರಕಿನ ಭಾಗವಾಗಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬಯಲಾಗಿದೆ.
ದಾಳಿಕೋರರಾದ ಫೈಸಲ್ ಜಾಟ್, ಹಬೀಬ್ ತಾಹೀರ್ ಮತ್ತು ಹಮ್ಜಾ ಅಫ್ಘಾನಿ ಅವರ ಬಳಿ ಇದ್ದ ಎರಡು ‘ರೆಡ್ಮಿ’ (RedMi) ಸರಣಿಯ ಫೋನ್ಗಳನ್ನು ಜುಲೈ 28, 2025 ರಂದು ದಚಿಗಾಮ್ ಅರಣ್ಯದಲ್ಲಿ ಎನ್ಕೌಂಟರ್ ಬಳಿಕ ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ರೆಡ್ಮಿ 9T (2021ರಲ್ಲಿ ಆಮದು) ಮತ್ತು ರೆಡ್ಮಿ ನೋಟ್ 12 (2023ರಲ್ಲಿ ಆಮದು) ಸೇರಿವೆ.
ಶಿಯೋಮಿ ಗ್ಲೋಬಲ್ ನೀಡಿದ ಮಾಹಿತಿಯ ಪ್ರಕಾರ, ರೆಡ್ಮಿ 9T ಫೋನ್ ‘ಟೆಕ್ ಸಿರತ್ ಪ್ರೈವೇಟ್ ಲಿಮಿಟೆಡ್’ ಎಂಬ ಕರಾಚಿ ಮೂಲದ ಕಂಪನಿಯ ಮೂಲಕ ಆಮದಾಗಿತ್ತು. ಇದರ ಹಣಕಾಸು ಜವಾಬ್ದಾರಿಯನ್ನು ಫೈಸಲ್ ಬ್ಯಾಂಕ್ ವಹಿಸಿತ್ತು. 2007ರ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಈ ಬ್ಯಾಂಕ್ಗೆ ಹಿಂದೆ ಲಷ್ಕರ್-ಎ-ತೈಬಾ ಮತ್ತು ಅಲ್-ಖೈದಾದಂತಹ ಉಗ್ರ ಸಂಘಟನೆಗಳ ನಂಟು ಇರುವ ಆರೋಪವಿದೆ.
ಈ ಫೋನ್ಗಳು 2021 ಮತ್ತು 2023ರಲ್ಲಿ ಆಮದುಗೊಂಡಿದ್ದರೂ, ಪಹಲ್ಗಾಂ ದಾಳಿಯ ಕೆಲವೇ ದಿನಗಳ ಮುನ್ನ ಮಾತ್ರ ಇವುಗಳನ್ನು ಸಕ್ರಿಯಗೊಳಿಸಲಾಗಿತ್ತು. ಇವುಗಳನ್ನು ದಾಳಿಗಾಗಿಯೇ ಪ್ರತ್ಯೇಕವಾಗಿ ಕಳ್ಳಸಾಗಣೆ ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಈ ಫೋನ್ಗಳಲ್ಲಿ ಯಾವುದೇ ಸೆಲ್ಯುಲಾರ್ ಸಂವಹನ ಡೇಟಾ ಸಿಕ್ಕಿಲ್ಲ, ಏಕೆಂದರೆ ಉಗ್ರರು ಇಂಟರ್ನೆಟ್ ಅಥವಾ ಮೊಬೈಲ್ ನೆಟ್ವರ್ಕ್ ಬಳಸದೆ, ಸುದೀರ್ಘ ದೂರದವರೆಗೆ ಸಂವಹನ ನಡೆಸಬಲ್ಲ ‘ಲಾಂಗ್ ರೇಂಜ್ ರೇಡಿಯೋ’ ತಂತ್ರಜ್ಞಾನವನ್ನು ಬಳಸುತ್ತಿದ್ದರು.
ಫೋನ್ಗಳಿಂದ ದಾಳಿಯ ಪ್ರದೇಶಗಳ ನಕ್ಷೆಗಳು ಮತ್ತು ಮಾರ್ಚ್ 30, 2025ರಂದು ಪಹಲ್ಗಾಂನ ಬೈಸರಾನ್ ಹುಲ್ಲುಗಾವಲಿನಲ್ಲಿ ಉಗ್ರರು ಹಾಕಿದ್ದ ಟೆಂಟ್ನ ಫೋಟೋಗಳು ಲಭ್ಯವಾಗಿವೆ. ಈ ಫೋಟೋಗಳು ಅವರು ಭದ್ರತಾ ಪಡೆಗಳ ಚಲನವಲನದ ಮೇಲೆ ನಿಗಾ ಇರಿಸಲು ಆಯಕಟ್ಟಿನ ಸ್ಥಳದಲ್ಲಿ ಅಡಗಿದ್ದನ್ನು ದೃಢಪಡಿಸುತ್ತವೆ.
2002ರ ವರದಿಯೊಂದರ ಪ್ರಕಾರ, 9/11 ದಾಳಿಯ ನಂತರ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಲಷ್ಕರ್-ಎ-ತೈಬಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಖಾತೆಗಳನ್ನು ಪರಿಶೀಲಿಸಿದಾಗ, ಅವು ಫೈಸಲ್ ಬ್ಯಾಂಕ್ ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿದ್ದವು ಎಂಬುದು ತಿಳಿದುಬಂದಿತ್ತು.
ಈ ಸ್ಫೋಟಕ ಮಾಹಿತಿಯು ಭಯೋತ್ಪಾದಕರಿಗೆ ಪಾಕಿಸ್ತಾನದ ಬ್ಯಾಂಕಿಂಗ್ ಮತ್ತು ವ್ಯಾಪಾರ ಜಾಲಗಳು ಹೇಗೆ ಬೆಂಬಲ ನೀಡುತ್ತಿವೆ ಎಂಬುದನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಬಟಾಬಯಲು ಮಾಡಿದೆ.








