ಮ್ಯಾನ್ಮಾರ್: ಈಶಾನ್ಯ ಮ್ಯಾನ್ಮಾರ್ನಲ್ಲಿ ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಕಟ್ಟಡದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ರಕ್ಷಣಾ ಕಾರ್ಯಕರ್ತರು ಮತ್ತು ಸ್ವತಂತ್ರ ಮಾಧ್ಯಮಗಳು ಈ ಮಾಹಿತಿ ನೀಡಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ಸ್ಫೋಟವು ಭಾನುವಾರ ಮಧ್ಯಾಹ್ನ ಚೀನಾ ಗಡಿಯ ಸಮೀಪವಿರುವ ಶಾನ್ ರಾಜ್ಯದ ನಾಮ್ಖಾಮ್ ಟೌನ್ಶಿಪ್ನ ಕೌಂಗ್ಟಪ್ ಗ್ರಾಮದಲ್ಲಿ ಸಂಭವಿಸಿದೆ. ಗಡಿಯಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶವು, ಮ್ಯಾನ್ಮಾರ್ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದಲ್ಲಿರುವ ಜನಾಂಗೀಯ ಸಶಸ್ತ್ರ ಗುಂಪು ‘ಟಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿ’ಯ (TNLA) ನಿಯಂತ್ರಣದಲ್ಲಿದೆ.
ಭಾನುವಾರ ಸಂಜೆಯ ಹೊತ್ತಿಗೆ ರಕ್ಷಣಾ ಕಾರ್ಯಕರ್ತರು ಒಟ್ಟು 46 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇವರಲ್ಲಿ ಆರು ಮಂದಿ ಮಕ್ಕಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲಾಗಿದೆ.
ಸ್ಫೋಟದ ತೀವ್ರತೆಗೆ ಸುಮಾರು 74 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವು ರಕ್ಷಣಾ ಕಾರ್ಯಕರ್ತರ ಪ್ರಕಾರ, ಸುಮಾರು 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸ್ಫೋಟದ ಸ್ಥಳದ ಸಮೀಪವಿದ್ದ 100ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ.








