ಅಂಕರಾ: ಪಶ್ಚಿಮ ಟರ್ಕಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ರಕ್ಷಾ ಬೇಲಿಗೆ (Guardrail) ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ‘ಕ್ಸಿನ್ಹುವಾ’ (Xinhua) ವರದಿ ಮಾಡಿದೆ.
ಟರ್ಕಿಯ ಇಜ್ಮಿರ್ ನಗರದಿಂದ ಮೆಡಿಟರೇನಿಯನ್ ರೆಸಾರ್ಟ್ ನಗರವಾದ ಅಂಟಲ್ಯಕ್ಕೆ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಟರ್ಕಿಯ ಡೆನಿಜ್ಲಿ ಪ್ರಾಂತ್ಯದ ಡೆನಿಜ್ಲಿ-ಐಡಿನ್ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್‌ನಲ್ಲಿ 38 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಸೇರಿದಂತೆ ಒಟ್ಟು 41 ಮಂದಿ ಇದ್ದರು ಎಂದು ಟರ್ಕಿಯ ಪ್ರಸಾರ ಸಂಸ್ಥೆ ‘ಎನ್‌ಟಿವಿ’ (NTV) ತಿಳಿಸಿದೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಬಸ್ ಚಾಲಕ ಮತ್ತು ಒಂಬತ್ತು ತಿಂಗಳ ಶಿಶುವೂ ಸೇರಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.








