ಕೋಲ್ಕತ್ತಾ: ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ಹಲ್ಲೆ ಘಟನೆಯು ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಅಭಿಷೇಕ್ ಬ್ಯಾನರ್ಜಿ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈ ಹಲ್ಲೆಗೆ ಬಿಜೆಪಿಯೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಜೊತೆಗೆ, ಅಭಿಷೇಕ್ ಬ್ಯಾನರ್ಜಿಗೆ ಚಿಕಿತ್ಸೆ ನೀಡದಂತೆ ಆಸ್ಪತ್ರೆಗಳ ಮೇಲೆ ಆಡಳಿತಾರೂಢ ಬಿಜೆಪಿ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
”ಅಧಿಕಾರದಲ್ಲಿರುವವರು ಆಸ್ಪತ್ರೆಗಳು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರು ಅಭಿಷೇಕ್ ಚಿಕಿತ್ಸೆ ಪಡೆಯುವುದನ್ನು ಬಯಸುತ್ತಿಲ್ಲ. ಆಸ್ಪತ್ರೆ ಆಡಳಿತ ಮಂಡಳಿಯು ಪೊಲೀಸರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ನನಗೆ ತಿಳಿಸಿದೆ. ವೈದ್ಯರು ಚಿಕಿತ್ಸೆ ನೀಡಲು ಬಯಸಿದರೂ ಅವರು ಒತ್ತಡದಲ್ಲಿದ್ದಾರೆ,” ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. “ರಾಹುಲ್ ಗಾಂಧಿ ನನಗೆ ಕರೆ ಮಾಡಿ, ಏನಾದರೂ ಅಗತ್ಯವಿದ್ದರೆ ಹೇಳಿ, ನಾನು ಅಭಿಷೇಕ್ ಬ್ಯಾನರ್ಜಿಯನ್ನು ಹೈದರಾಬಾದ್ ಅಥವಾ ಬೇರೆ ಎಲ್ಲಿಗಾದರೂ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದ್ದಾರೆ,” ಎಂದು ಮಮತಾ ತಿಳಿಸಿದ್ದಾರೆ.
ಮತ್ತೊಂದೆಡೆ, ಬೆಲ್ಲೆ ವ್ಯೂ ಕ್ಲಿನಿಕ್ (Belle Vue Clinic) ನೀಡಿರುವ ವೈದ್ಯಕೀಯ ವರದಿಯು ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ಭಿನ್ನವಾಗಿದೆ.ಮೇ 30, 2026 ರಂದು 38 ವರ್ಷದ ಅಭಿಷೇಕ್ ಬ್ಯಾನರ್ಜಿ ಅವರನ್ನು ಪರೀಕ್ಷಿಸಿದಾಗ, ಅವರ ಎದೆಯ ಮೇಲೆ ಸಣ್ಣ ಪೆಟ್ಟು (bruise) ಹೊರತುಪಡಿಸಿ ಯಾವುದೇ ಗಂಭೀರವಾದ ದೈಹಿಕ ಗಾಯಗಳು ಕಂಡುಬಂದಿಲ್ಲ.ಪರೀಕ್ಷೆಯ ಸಮಯದಲ್ಲಿ ಅವರು ಪ್ರಜ್ಞೆಯಲ್ಲಿದ್ದರು ಮತ್ತು ಸಹಜವಾಗಿ ಸಂವಹನ ನಡೆಸುತ್ತಿದ್ದರು.
ಆದ್ದರಿಂದ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಸಕಲೈನ್, ರಿಂಗರ್ಸ್ ಲ್ಯಾಕ್ಟೇಟ್ ಮತ್ತು ನೋವು ನಿವಾರಕಗಳನ್ನು ನೀಡಲಾಗಿದೆ.








