ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ರೋಚಕ ಘಟ್ಟಕ್ಕೆ ವೇದಿಕೆ ಸಿದ್ಧವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ನಡುವಿನ ಬಹುನಿರೀಕ್ಷಿತ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆರ್‍ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಸಿಲಿಕಾನ್ ಸಿಟಿಯಲ್ಲಿ ಸಂಭ್ರಮಾಚರಣೆ ಮಾಡಲು ಕಾದು ಕುಳಿತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಬೆಂಗಳೂರು ನಗರ ಪೊಲೀಸರು ದಿಢೀರ್ ಶಾಕ್ ನೀಡಿದ್ದಾರೆ. ಪಂದ್ಯದ ಬಳಿಕ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದ್ದಾರೆ.
ಪ್ರಮುಖ ಫ್ಲೈಓವರ್‌ಗಳು ಕ್ಲೋಸ್
ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳನ್ನು ಇಂದು ರಾತ್ರಿ ಬಂದ್ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಇಂದು (ಮೇ 31) ರಾತ್ರಿ 11 ಗಂಟೆಯಿಂದ ನಾಳೆ ಮುಂಜಾನೆ 5 ಗಂಟೆಯವರೆಗೆ ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಂದ್ಯ ಮುಗಿದ ಬಳಿಕ ಅಭಿಮಾನಿಗಳು ಫ್ಲೈಓವರ್‌ಗಳ ಮೇಲೆ ಜಮಾಯಿಸಿ ಸಂಭ್ರಮಾಚರಣೆ ಮಾಡುವುದು, ಬೈಕ್ ರೇಸಿಂಗ್ ಅಥವಾ ಅತಿ ವೇಗದ ಚಾಲನೆ ಮಾಡುವುದನ್ನು ತಡೆಯಲು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ಬಂದ್? ಇಲ್ಲಿದೆ ಮಾಹಿತಿ
ಪೊಲೀಸ್ ಇಲಾಖೆಯ ಆದೇಶದಂತೆ ಈಗಾಗಲೇ ನಗರದ ಪ್ರಮುಖ ಮತ್ತು ಜನನಿಬಿಡ ಫ್ಲೈಓವರ್‌ಗಳನ್ನು ಬಂದ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ಬಿಡುವುವಿಲ್ಲದೆ ವಾಹನ ಸಂಚಾರ ಇರುವ ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಫ್ಲೈಓವರ್ ಹಾಗೂ ರಾಗಿಗುಡ್ಡದ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ರಾತ್ರಿ 11 ಗಂಟೆಯ ನಂತರ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಇದರೊಂದಿಗೆ ನಗರದ ಇತರೆ ಸೂಕ್ಷ್ಮ ಪ್ರದೇಶಗಳ ಮೇಲ್ಸೇತುವೆಗಳ ಮೇಲೂ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಕಾವಲು ಕಾಯಲಿದ್ದಾರೆ.
ಬಿಗ್ ಸ್ಕ್ರೀನ್‌ಗಳ ಮೇಲೆ ಪೊಲೀಸರ ಕಣ್ಣು
ಪಂದ್ಯದ ರೋಮಾಂಚನವನ್ನು ಸವಿಯಲು ನಗರದಾದ್ಯಂತ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ದೊಡ್ಡ ಪರದೆಗಳನ್ನು (Big Screens) ಅಳವಡಿಸಲಾಗಿದೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್‌ಗಳು, ಪಬ್‌ಗಳು, ಕ್ಲಬ್‌ಗಳು ಮತ್ತು ಸಾರ್ವಜನಿಕ ಮೈದಾನಗಳಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿರುವ ಜಾಗಗಳನ್ನು ಗುರುತಿಸಿ, ಅಲ್ಲಿಗೆ ವಿಶೇಷ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವ ಭಾಗಗಳಲ್ಲಿ ಅತಿ ಹೆಚ್ಚು ಜನದಟ್ಟಣೆ ಸೇರಬಹುದು ಎಂಬುದನ್ನು ಮುಂಚಿತವಾಗಿಯೇ ಅಂದಾಜಿಸಿ ಪಟ್ಟಿ ಮಾಡಲಾಗುತ್ತಿದೆ.
ಇನ್ಸ್‌ಪೆಕ್ಟರ್‌ಗಳಿಗೆ ಹೈ ಅಲರ್ಟ್ ಸೂಚನೆ
ಪಂದ್ಯದ ಫಲಿತಾಂಶದ ಬಳಿಕ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಹಿರಿಯ ಅಧಿಕಾರಿಗಳು ಹೈ ಅಲರ್ಟ್ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡುವುದು, ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಅಥವಾ ಅತಿಯಾದ ಸಂಭ್ರಮಾಚರಣೆಯ ನೆಪದಲ್ಲಿ ಗಲಾಟೆ ಮಾಡುವುದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಗಸ್ತು ವಾಹನಗಳನ್ನು ಹೆಚ್ಚಿಸಲಾಗಿದ್ದು, ರಾತ್ರಿ ಪೂರ್ತಿ ನಗರದಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರು ಸಜ್ಜಾಗಿದ್ದಾರೆ.








