ನವದೆಹಲಿ: ದಕ್ಷಿಣ ದೆಹಲಿಯ ಸೈದುಲಾಜಾಬ್ ಪ್ರದೇಶದಲ್ಲಿರುವ ಸಾಕೇತ್ ಮೆಟ್ರೋ ನಿಲ್ದಾಣದ ಸಮೀಪ ಶನಿವಾರ ಸಂಜೆ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ 26 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಕಟ್ಟಡದಲ್ಲಿ ಮೆಸ್ ಮತ್ತು ಪೇಯಿಂಗ್ ಗೆಸ್ಟ್ (PG) ವಸತಿ ಸೌಕರ್ಯಗಳಿದ್ದವು.
ಶನಿವಾರ ರಾತ್ರಿ 7:44ಕ್ಕೆ ಮಾಹಿತಿ ದೊರೆತ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ದೆಹಲಿ ಅಗ್ನಿಶಾಮಕ ದಳ (DFS), ದೆಹಲಿ ಪೊಲೀಸ್, ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಭಾನುವಾರ ಮುಂಜಾನೆ 3:45ರ ವೇಳೆಗೆ ಒಂಬತ್ತು ಮಂದಿಯನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.
ರವಿ ಎಂಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿಯೇ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಉಳಿದ ಎಂಟು ಮಂದಿ ಗಾಯಾಳುಗಳನ್ನು (ತರುಣ್ ಕುಮಾರ್, ಸೈಕಾ ಖಾನ್, ನೀಲಂ ಯಾದವ್, ಆದಿತ್ಯ ಶರ್ಮಾ, ಕ್ಷಿತಿಜ್ ಪ್ರತಾಪ್, ಅನುಜ್ ದೀಕ್ಷಿ, ಆಸ್ಥಾ ಮತ್ತು ವಿಶಾಲ್) ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ.
ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ, ರಕ್ಷಣಾ ಕಾರ್ಯ ಮುಂದುವರಿದಿದೆ. ಸ್ಥಳೀಯ ನಿವಾಸಿಗಳು ರಕ್ಷಣಾ ತಂಡಗಳು ಬರುವ ಮೊದಲೇ ಇಬ್ಬರನ್ನು ರಕ್ಷಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತಂಕದಲ್ಲಿ ವಿದ್ಯಾರ್ಥಿಗಳು:
ಈ ಪ್ರದೇಶವು ವಿದ್ಯಾರ್ಥಿಗಳು ಹೆಚ್ಚಾಗಿ ವಾಸಿಸುವ, ಕೋಚಿಂಗ್ ಸೆಂಟರ್‌ಗಳು ಮತ್ತು ಮೆಸ್ಸ್‌ಗಳು ಇರುವ ಸ್ಥಳವಾಗಿದೆ. ತಮ್ಮ ಸ್ನೇಹಿತರು ಕಾಣೆಯಾಗಿರುವ ಬಗ್ಗೆ ಆತಂಕಗೊಂಡಿದ್ದ ಹಲವು ವಿದ್ಯಾರ್ಥಿಗಳು ಘಟನಾ ಸ್ಥಳದ ಹೊರಗೆ ಜಮಾಯಿಸಿದ್ದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ. “ಎನ್‌ಡಿಆರ್‌ಎಫ್, ದೆಹಲಿ ಅಗ್ನಿಶಾಮಕ ದಳ ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸಿಲುಕಿರುವವರನ್ನು ರಕ್ಷಿಸುವುದು ಮತ್ತು ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ನೆರವು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ,” ಎಂದು ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ತಿಳಿಸಿದ್ದಾರೆ.
ಕಟ್ಟಡ ಕುಸಿಯಲು ನಿಖರವಾದ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸದ್ಯಕ್ಕೆ ಅವಶೇಷಗಳನ್ನು ತೆರವುಗೊಳಿಸುವ ಮತ್ತು ಎಲ್ಲರನ್ನೂ ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ.








