ಪ್ಯಾರಿಸ್: ಫುಟ್ಬಾಲ್‌ನ ಪ್ರತಿಷ್ಠಿತ ಚಾಂಪಿಯನ್ಸ್ ಲೀಗ್‌ನಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್ (PSG) ತಂಡ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡ ಸಂಭ್ರಮವು ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದೆ. ಈ ಸಂಬಂಧ ಭದ್ರತಾ ಪಡೆಗಳು ಹಲವರನ್ನು ವಶಕ್ಕೆ ಪಡೆದಿವೆ.
ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ಪಿಎಸ್‌ಜಿ ತಂಡದ ಗೆಲುವಿನ ಬೆನ್ನಲ್ಲೇ ಪ್ಯಾರಿಸ್‌ನ ಪ್ರತಿಷ್ಠಿತ 8ನೇ ಅರೋಂಡಿಸ್‌ಮೆಂಟ್ (Arrondissement) ಪ್ರದೇಶದಲ್ಲಿ ಕಿಡಿಗೇಡಿಗಳ ಗುಂಪು ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದೆ. ನಂತರ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ.
ಸಂಭ್ರಮಾಚರಣೆಯ ವೇಳೆ ಸುಮಾರು 20,000 ಜನರು ಚಾಂಪ್ಸ್-ಎಲೀಸೀಸ್ (Champs-Elysees) ಮತ್ತು ಆರ್ಕ್ ಡಿ ಟ್ರಯಂಫ್ (Arc de Triomphe) ಸಮೀಪ ಜಮಾಯಿಸಿದ್ದರು. ಈ ವೇಳೆ ಕಿಡಿಗೇಡಿಗಳು ಅಂಗಡಿಗಳು, ಬೇಕರಿ ಮತ್ತು ರೆಸ್ಟೋರೆಂಟ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ರಸ್ತೆಯಲ್ಲಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದೃಶ್ಯಗಳು ಕಂಡುಬಂದಿವೆ.
ಭದ್ರತೆಗಾಗಿ ನಗರದಾದ್ಯಂತ 8,000 ಪೊಲೀಸರನ್ನು ನಿಯೋಜಿಸಲಾಗಿತ್ತು. ರಾತ್ರಿ 10 ಗಂಟೆಯ ವೇಳೆಗೆ 45 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಗಾಯಗಳಾಗಿವೆ.
16ನೇ ಅರೋಂಡಿಸ್‌ಮೆಂಟ್‌ನ ಪಿಎಸ್‌ಜಿ ಸ್ಟೇಡಿಯಂ ಬಳಿ ಜಮಾಯಿಸಿದ್ದ ಸುಮಾರು 1,000 ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸೈಕಲ್‌ಗಳನ್ನು ಬಳಸಿ ಹಾಕಲಾಗಿದ್ದ ತಡೆಗೋಡೆಗಳನ್ನು (barricades) ತೆರವುಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.








