ಬೆಳಗಾವಿ: ಬೆಳಗಾವಿ ನಗರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ರಾಜ್ಯ ವಿಪತ್ತು ಸ್ಪಂದನಾ ಪಡೆಯ (SDRF) ಪೊಲೀಸ್ ಇನ್ಸ್‌ಪೆಕ್ಟರ್ (CPI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ ಚೌಗಲೆ (37) ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಚನ್ನಮ್ಮ ನಗರದಲ್ಲಿರುವ ತಮ್ಮ ಮನೆಯ ರೂಮ್‌ನಲ್ಲಿ ಬಾಗಿಲು ಹಾಕಿಕೊಂಡು ಅವರು ಈ ಗಂಭೀರ ನಿರ್ಧಾರ ಕೈಗೊಂಡಿದ್ದಾರೆ. ಘಟನೆ ನಡೆದ ತಕ್ಷಣವೇ ಅವರ ಪತ್ನಿ, ಪತಿಯ ಆತ್ಮಹತ್ಯೆಯ ಯತ್ನದ ಕುರಿತು ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಾಗಿಲು ಮುರಿದು ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಯತ್ನ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ ಅಧೀನ ಸಿಬ್ಬಂದಿ, ತಕ್ಷಣವೇ ರೂಮ್‌ನ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಕಾರಣ ನಿಗೂಢ-ತನಿಖೆ ಆರಂಭ: > ಸಿಪಿಐ ಶ್ರೀಶೈಲ ಚೌಗಲೆ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಘಟನೆಯು ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮಾನಸಿಕ ತೊಂದರೆ ಅಥವಾ ಆತ್ಮಹತ್ಯೆಯ ಆಲೋಚನೆಗಳಿದ್ದರೆ ದಯವಿಟ್ಟು ಸಹಾಯವಾಣಿಗಳನ್ನು ಸಂಪರ್ಕಿಸಿ.
ವಂತಾರದ ಬಗ್ಗೆ ಮರುತನಿಖೆ ಆದೇಶ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








