ಶಿವಮೊಗ್ಗ: ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯ ದೃಷ್ಟಿಯಿಂದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿಹಾಕಲು ಬೇಳೂರು ಅನಿವಾರ್ಯ
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯನ್ನು ಅತ್ಯಂತ ಪ್ರಬಲವಾಗಿ ತಮ್ಮ ನೇರ ಹಾಗೂ ದಿಟ್ಟ ಹೇಳಿಕೆಗಳ ಮೂಲಕ ಕಟ್ಟಿಹಾಕುವ ರಾಜಕೀಯ ಸಾಮರ್ಥ್ಯ ಇರುವುದು ಗೋಪಾಲಕೃಷ್ಣ ಬೇಳೂರು ಅವರಿಗೆ ಮಾತ್ರ ಎಂದು ಸೋಮಶೇಖರ ಲ್ಯಾವಿಗೆರೆ ಹೇಳಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಬೇಳೂರು ಅವರು ಈಗಾಗಲೇ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರೊಂದಿಗೆ ಉತ್ತಮ ಸೌಹಾರ್ದ ಸಂಬಂಧವನ್ನು ಅವರು ಹೊಂದಿದ್ದಾರೆ ಎಂದು ಲ್ಯಾವಿಗೆರೆ ಗುಣಗಾನ ಮಾಡಿದ್ದಾರೆ.
ಜನರ ನೋವಿಗೆ ಸ್ಪಂದಿಸುವ ನಾಯಕ
ಗೋಪಾಲಕೃಷ್ಣ ಬೇಳೂರು ಅವರು ತಮಗೆ ಅಧಿಕಾರ ಇಲ್ಲದ ಸಂದರ್ಭದಲ್ಲಿಯೂ ಸದಾ ಜನರ ಮಧ್ಯೆ ಇದ್ದು, ಸಾರ್ವಜನಿಕರ ನೋವು-ನಲಿವುಗಳಿಗೆ ಸ್ಪಂದಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಸಾಗರ ಕ್ಷೇತ್ರ ಮಾತ್ರವಲ್ಲದೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.
ಅಭಿಮಾನಿಗಳ ಬಹುಕಾಲದ ಬೇಡಿಕೆ:
“ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸಚಿವ ಸಂಪುಟದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ಮೂಲಕ ಮಲೆನಾಡು ಭಾಗದ ಜನತೆಯ ಹಾಗೂ ಬೇಳೂರು ಅಭಿಮಾನಿಗಳ ಬಹುಕಾಲದ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಈಡೇರಿಸಬೇಕು.” — ಸೋಮಶೇಖರ ಲ್ಯಾವಿಗೆರೆ, ಕಾಂಗ್ರೆಸ್ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಾಗರ
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
BREAKING: ಡಿ.ಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್: ಜೂನ್.3ರಂದು ಪದಗ್ರಹಣ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








