ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (MoHFW) ಇಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6) ಅನ್ನು ಬಿಡುಗಡೆ ಮಾಡಿದೆ. ಈ ದತ್ತಾಂಶವು ತಾಯಂದಿರ ಮತ್ತು ಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಹಾಗೂ ಆರ್ಥಿಕ ಭದ್ರತೆಯ ವಿಷಯದಲ್ಲಿ ಭಾರತವು ಸಾಧಿಸಿರುವ “ತ್ವರಿತ ಪ್ರಗತಿಯನ್ನು” ಪ್ರತಿಬಿಂಬಿಸುತ್ತದೆ. ಮಕ್ಕಳ ಹೆಚ್ಚಿನ ಲಸಿಕಾಕರಣವು ಸರ್ಕಾರಿ ಆರೋಗ್ಯ ಸೌಲಭ್ಯಗಳ ಮೂಲಕವೇ ನಡೆದಿದ್ದು, ಜನರು ಈ ಸೌಲಭ್ಯಗಳಿಗೆ ನೀಡಿರುವ ಆದ್ಯತೆಯನ್ನು ಇದು ತೋರಿಸುತ್ತದೆ.
NFHS-6 ಅನ್ನು 2023-24ರ ಅವಧಿಯಲ್ಲಿ MoHFW ನಡೆಸಿದ್ದು, ಮುಂಬೈನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಷನ್ ಸೈನ್ಸಸ್ (IIPS) ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದೆ. 715 ಜಿಲ್ಲೆಗಳ ಸುಮಾರು 6.79 ಲಕ್ಷ ಕುಟುಂಬಗಳನ್ನು ಒಳಗೊಂಡಿರುವ ಈ ಸಮೀಕ್ಷೆಯು ಜನಸಂಖ್ಯೆ, ಆರೋಗ್ಯ, ಪೌಷ್ಟಿಕಾಂಶ ಮತ್ತು ಕುಟುಂಬ ಕಲ್ಯಾಣ ಸೂಚಕಗಳ ಕುರಿತು ಪ್ರಮುಖ ಸಾಕ್ಷ್ಯಗಳನ್ನು ಒದಗಿಸುತ್ತದೆ ಮತ್ತು ಜಿಲ್ಲಾ ಮಟ್ಟದವರೆಗೆ ಸಾಕ್ಷ್ಯಾಧಾರಿತ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬೆಂಬಲ ನೀಡುತ್ತದೆ.
ಸಮೀಕ್ಷೆಯ ಪ್ರಕಾರ, ಸುಸ್ಥಿರ ನೀತಿಗಳ ಮಧ್ಯಸ್ಥಿಕೆಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಕೇಂದ್ರೀಕೃತ ಅನುಷ್ಠಾನದಿಂದಾಗಿ ಭಾರತವು ಆರೋಗ್ಯ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಅಭಿವೃದ್ಧಿ ಸೂಚಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ.
ತಾಯಂದಿರ ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಮಹತ್ವದ ಸಾಧನೆಗಳು:
ದೇಶಾದ್ಯಂತ ತಾಯಂದಿರ ಮತ್ತು ಮಕ್ಕಳ ಆರೋಗ್ಯ ಸೇವೆಗಳಲ್ಲಿ ಗಮನಾರ್ಹ ಸುಧಾರಣೆಗಳಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಶೇ. 95.9ರಷ್ಟು ಗರ್ಭಿಣಿಯರು ಪ್ರಸವಪೂರ್ವ ಆರೈಕೆಯನ್ನು (ANC) ಪಡೆದಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ANC ಪಡೆದ ತಾಯಂದಿರ ಪ್ರಮಾಣ ಶೇ. 70.0 ರಿಂದ ಶೇ. 76.2ಕ್ಕೆ ಏರಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ANC ಭೇಟಿಗಳನ್ನು ಪಡೆದ ತಾಯಂದಿರ ಪ್ರಮಾಣ ಶೇ. 58.5 ರಿಂದ ಶೇ. 65.2ಕ್ಕೆ ಹೆಚ್ಚಾಗಿದ್ದು, ತಾಯಂದಿರ ಆರೋಗ್ಯ ಸೇವೆಯಲ್ಲಿನ ನಿರಂತರತೆಯನ್ನು ತೋರಿಸುತ್ತದೆ.
ಸಾಂಸ್ಥಿಕ ಹೆರಿಗೆಗಳ ಪ್ರಮಾಣವು ಶೇ. 88.6 ರಿಂದ ಶೇ. 90.6ಕ್ಕೆ ಹೆಚ್ಚಾಗಿದ್ದು, ಭಾರತವು ಸಾರ್ವತ್ರಿಕ ವ್ಯಾಪ್ತಿಯತ್ತ ದಾಪುಗಾಲು ಹಾಕುತ್ತಿದೆ. “ನುರಿತ ಆರೋಗ್ಯ ಸಿಬ್ಬಂದಿಯಿಂದ ಹೆರಿಗೆ ಮಾಡಿಸಿಕೊಳ್ಳುವವರ ಪ್ರಮಾಣ ಶೇ. 89.4 ರಿಂದ ಶೇ. 91.3ಕ್ಕೆ ಸುಧಾರಿಸಿದೆ. ಹೆರಿಗೆಯಾದ ಎರಡು ದಿನಗಳೊಳಗೆ ವೈದ್ಯರು/ನರ್ಸ್/ಆಶಾ ಕಾರ್ಯಕರ್ತೆಯರಿಂದ ನವಜಾತ ಶಿಶುವಿನ ಆರೈಕೆ ಪಡೆಯುವ ಪ್ರಮಾಣ ಶೇ. 79.1 ರಿಂದ ಶೇ. 85.3ಕ್ಕೆ ಏರಿಕೆಯಾಗಿದೆ.”
ತಾಯಂದಿರ ಪೌಷ್ಟಿಕಾಂಶದಲ್ಲಿ ಸುಧಾರಣೆ:
ತಾಯಂದಿರ ಪೌಷ್ಟಿಕಾಂಶ ಸೂಚಕಗಳಲ್ಲೂ ಸುಧಾರಣೆ ಕಂಡುಬಂದಿದೆ. ಗರ್ಭಾವಸ್ಥೆಯಲ್ಲಿ 100 ದಿನ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಐರನ್ ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸುವ ತಾಯಂದಿರ ಪ್ರಮಾಣ ಶೇ. 44.1 ರಿಂದ ಶೇ. 54.9ಕ್ಕೆ ಹೆಚ್ಚಾಗಿದೆ. 180 ದಿನ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಸೇವಿಸುವವರ ಪ್ರಮಾಣ ಶೇ. 26.0 ರಿಂದ ಶೇ. 37.8ಕ್ಕೆ ಏರಿದೆ.
”ಜನನಿ ಸುರಕ್ಷಾ ಯೋಜನೆ (JSY), ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK), ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (PMSMA), ಸುರಕ್ಷಿತ ಮಾತೃತ್ವ ಆಶ್ವಾಸನ (SUMAN) ಮುಂತಾದ ಉಪಕ್ರಮಗಳ ಅನುಷ್ಠಾನದಿಂದ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಬಲಗೊಂಡಿದೆ,” ಎಂದು ವರದಿ ತಿಳಿಸಿದೆ.
ಕುಟುಂಬ ಯೋಜನೆ ಮತ್ತು ಲಸಿಕಾಕರಣದ ಪ್ರಗತಿ:
ಕುಟುಂಬ ಯೋಜನೆಯಲ್ಲಿ, ಭಾರತದ ಒಟ್ಟು ಫಲವತ್ತತೆ ದರ (TFR) 2.0 ಮಟ್ಟದಲ್ಲೇ ಉಳಿದಿದೆ. ಗರ್ಭನಿರೋಧಕ ಬಳಕೆಯ ಪ್ರಮಾಣ (CPR) ಶೇ. 66.7 ರಿಂದ ಶೇ. 69.1ಕ್ಕೆ ಏರಿಕೆಯಾಗಿದೆ.
ಸಾರ್ವತ್ರಿಕ ಲಸಿಕಾ ವ್ಯಾಪ್ತಿ:
ಭಾರತವು ಸಾರ್ವತ್ರಿಕ ಲಸಿಕಾ ವ್ಯಾಪ್ತಿಯತ್ತ ವೇಗವಾಗಿ ಸಾಗುತ್ತಿದೆ. 12-23 ತಿಂಗಳ ಮಕ್ಕಳಲ್ಲಿ ಪೂರ್ಣ ಲಸಿಕಾಕರಣವು ಶೇ. 83.8 ರಿಂದ ಶೇ. 87.1ಕ್ಕೆ ಹೆಚ್ಚಾಗಿದೆ. “ಶೇ. 95.6ರಷ್ಟು ಮಕ್ಕಳು ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಮೂಲಕ ಹೆಚ್ಚಿನ ಲಸಿಕೆಗಳನ್ನು ಪಡೆದಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಇದು ಪುನರುಚ್ಚರಿಸುತ್ತದೆ.” ರೋಟವೈರಸ್ ಲಸಿಕೆಯ ವ್ಯಾಪ್ತಿಯು ಶೇ. 36.4 ರಿಂದ ಶೇ. 85.4ಕ್ಕೆ ಗಣನೀಯವಾಗಿ ಹೆಚ್ಚಾಗಿದೆ.
ಮಕ್ಕಳ ಆರೋಗ್ಯ ಸೂಚಕಗಳಲ್ಲಿ ಸುಧಾರಣೆ:
ಮಕ್ಕಳಲ್ಲಿ ಉಸಿರಾಟದ ಸೋಂಕಿನ (ARI) ಲಕ್ಷಣಗಳು ಶೇ. 2.8 ರಿಂದ ಶೇ. 1.9ಕ್ಕೆ ಇಳಿದಿವೆ ಮತ್ತು ತೀವ್ರ ಅತಿಸಾರದ ಪ್ರಮಾಣ ಶೇ. 0.5ಕ್ಕೆ ಇಳಿದಿದೆ.
ಮಕ್ಕಳ ಪೌಷ್ಟಿಕಾಂಶದಲ್ಲಿ ಪ್ರೋತ್ಸಾಹದಾಯಕ ಪ್ರಗತಿ:
ಐದು ವರ್ಷದೊಳಗಿನ ಮಕ್ಕಳಲ್ಲಿ ‘ಸ್ಟಂಟಿಂಗ್’ (ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು) ಶೇ. 35.5 ರಿಂದ ಶೇ. 29.3ಕ್ಕೆ ಇಳಿಕೆಯಾಗಿದೆ. ‘ಸಿವಿಯರ್ ವೇಸ್ಟಿಂಗ್’ (ತೀವ್ರ ಅಪೌಷ್ಟಿಕತೆ) ಶೇ. 7.7 ರಿಂದ ಶೇ. 5.2ಕ್ಕೆ ಕುಸಿದಿದೆ.
ಆರೋಗ್ಯ ವಿಮಾ ವ್ಯಾಪ್ತಿಯ ವಿಸ್ತರಣೆ:
ಆರೋಗ್ಯ ವಿಮೆ/ಹಣಕಾಸು ಯೋಜನೆಯ ವ್ಯಾಪ್ತಿಯು ಕುಟುಂಬ ಮಟ್ಟದಲ್ಲಿ ಶೇ. 41.0 ರಿಂದ ಶೇ. 60.2ಕ್ಕೆ ಗಣನೀಯವಾಗಿ ವಿಸ್ತರಿಸಿದೆ. ಆಯುಷ್ಮಾನ್ ಭಾರತ್-ಪಿಎಂ-ಜೆಎವೈ ಯೋಜನೆಗಳು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಮಹಿಳಾ ಸಬಲೀಕರಣ ಮತ್ತು ಮುಟ್ಟಿನ ನೈರ್ಮಲ್ಯ:
ಮಹಿಳೆಯರ ಡಿಜಿಟಲ್ ಮತ್ತು ಆರ್ಥಿಕ ಸಬಲೀಕರಣದಲ್ಲಿ ಮುನ್ನಡೆ ಸಾಧಿಸಲಾಗಿದೆ. ಇಂಟರ್ನೆಟ್ ಬಳಸುವ ಮಹಿಳೆಯರ ಪ್ರಮಾಣ ಶೇ. 33.3 ರಿಂದ ಶೇ. 64.3ಕ್ಕೆ ಹೆಚ್ಚಾಗಿದೆ. ಬ್ಯಾಂಕ್ ಖಾತೆ ಹೊಂದಿರುವ ಮಹಿಳೆಯರ ಪ್ರಮಾಣ ಶೇ. 78.6 ರಿಂದ ಶೇ. 89.0ಕ್ಕೆ ಏರಿದೆ. 15-24 ವರ್ಷದ ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಬಳಕೆಯು ಶೇ. 77.6 ರಿಂದ ಶೇ. 79.2ಕ್ಕೆ ಸುಧಾರಿಸಿದೆ.








