ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ವಿದ್ಯಮಾನವೊಂದು ನಡೆದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥ್ಯದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಇಟ್ಟಿದ್ದ ಪ್ರಸ್ತಾಪಕ್ಕೆ ಫ್ರಾಂಚೈಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂತ್ ಅವರ ರಾಜೀನಾಮೆ ಮನವಿಯನ್ನು ಆಡಳಿತ ಮಂಡಳಿ ಪುರಸ್ಕರಿಸಿದೆ.
ಪಂತ್ ನಿರ್ಧಾರಕ್ಕೆ ಸಿಕ್ಕಿತು ಗೌರವ
ಈ ಮಹತ್ವದ ಬದಲಾವಣೆ ಕುರಿತು ಪ್ರಕಟಣೆ ನೀಡಿರುವ ಲಕ್ನೋ ತಂಡದ ಆಡಳಿತ ಮಂಡಳಿ, “ರಿಷಭ್ ಪಂತ್ ಅವರೇ ಸ್ವತಃ ಮುಂಚೂಣಿಗೆ ಬಂದು ನಾಯಕತ್ವದ ಹೊಣೆಗಾರಿಕೆಯಿಂದ ಪಕ್ಕಕ್ಕೆ ಸರಿಯುವ ಇಚ್ಛೆ ವ್ಯಕ್ತಪಡಿಸಿದ್ದರು. ಅವರ ಈ ವೈಯಕ್ತಿಕ ನಿರ್ಧಾರವನ್ನು ನಾವು ಗೌರವದಿಂದ ಒಪ್ಪಿಕೊಂಡಿದ್ದೇವೆ. ಇಂತಹ ನಿರ್ಣಾಯಕ ಘಟ್ಟದಲ್ಲಿ ತೀರ್ಮಾನ ಕೈಗೊಳ್ಳುವುದು ಸುಲಭವಲ್ಲ. ತಂಡವನ್ನು ಮುನ್ನಡೆಸುವಲ್ಲಿ ಮತ್ತು ಡ್ರೆಸ್ಸಿಂಗ್ ರೂಮ್ನಲ್ಲಿ ಧನಾತ್ಮಕ ವಾತಾವರಣ ನಿರ್ಮಿಸುವಲ್ಲಿ ಪಂತ್ ನೀಡಿದ ಅತ್ಯಮೂಲ್ಯ ಕೊಡುಗೆಗೆ ನಾವು ಸದಾ ಋಣಿಯಾಗಿದ್ದೇವೆ” ಎಂದು ತಿಳಿಸಿದೆ.
Official announcement. pic.twitter.com/7WeOwpkDr6
— Lucknow Super Giants (@LucknowIPL) May 29, 2026
ಹೊಸದಾಗಿ ತಂಡ ಕಟ್ಟಲು ಲಕ್ನೋ ಪ್ಲಾನ್
ನಾಯಕತ್ವದ ಬದಲಾವಣೆಯ ಬೆನ್ನಲ್ಲೇ ಭವಿಷ್ಯದ ಕಾರ್ಯತಂತ್ರದ ಬಗ್ಗೆಯೂ ಎಲ್ಎಸ್ಜಿ ಸುಳಿವು ನೀಡಿದೆ. “ನಮ್ಮ ಮುಂದಿನ ಗುರಿ ಇಡೀ ತಂಡವನ್ನು ಒಟ್ಟಾಗಿ ಮುನ್ನಡೆಸುವುದಾಗಿದೆ. ಐಪಿಎಲ್ನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಲು ಪೂರಕವಾಗುವಂತೆ ಇಡೀ ತಂಡವನ್ನು ಮರುಸಂಘಟಿಸುವ ಹಾಗೂ ಹೊಸ ರೂಪ ನೀಡುವ ಪ್ರಕ್ರಿಯೆಗೆ ನಾವು ಈಗ ಆದ್ಯತೆ ನೀಡುತ್ತಿದ್ದೇವೆ” ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.
ಪಂತ್ ಅವರ ಈ ದಿಢೀರ್ ನಿರ್ಧಾರದಿಂದಾಗಿ ಮುಂಬರುವ ಪಂದ್ಯಗಳಿಗೆ ಲಕ್ನೋ ತಂಡಕ್ಕೆ ಹೊಸ ನಾಯಕ ಯಾರು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ದಟ್ಟವಾಗಿದೆ.








