ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಸಾರ್ವಜನಿಕರು ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸೀಟುಗಳ ಲಭ್ಯತೆ ಹಾಗೂ ದೂರದ ಪ್ರಯಾಣದ ವೇಳೆ ಹೋಟೆಲ್‌ಗಳಲ್ಲಿ ಆಗುತ್ತಿರುವ ಅನ್ಯಾಯಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಯಾಣಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಎರಡು ಪ್ರತ್ಯೇಕ ಕಡಕ್ ಟಿಪ್ಪಣಿಗಳ ಮೂಲಕ ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ.
1. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಸೀಟು ಬೇರೆಯವರಿಗೆ ಸಿಕ್ಕರೆ ಕಠಿಣ ಕ್ರಮ!
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿನಿತ್ಯ ಸುಮಾರು 1.25 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದರೆ, ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ (ವಿಕಲಚೇತನರಿಗೆ) ಮೀಸಲಾದ ಸೀಟುಗಳಲ್ಲಿ ಇತರೆ ಸಾಮಾನ್ಯ ಪ್ರಯಾಣಿಕರು ಕುಳಿತು ಪ್ರಯಾಣಿಸುತ್ತಿರುವುದು ಸಚಿವರ ಗಮನಕ್ಕೆ ಬಂದಿದೆ. ಇದರಿಂದಾಗಿ ಅರ್ಹ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಸೀಟುಗಳು ಸಿಗದೇ ತೀವ್ರ ತೊಂದರೆಯಾಗುತ್ತಿತ್ತು. ಈ ಕುರಿತು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲೂ ವರದಿ ಪ್ರಕಟವಾಗಿತ್ತು.
ಸಚಿವರ ಆದೇಶವೇನು?
-
ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಮೀಸಲಿರುವ ಸೀಟುಗಳಲ್ಲಿ ಅವರೇ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಬೇಕು.
-
ಈ ನಿಯಮದ ಬಗ್ಗೆ ಬಸ್ಸಿನ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ (ಚಾಲಕರು ಮತ್ತು ನಿರ್ವಾಹಕರು) ಕಡ್ಡಾಯವಾಗಿ ಅರಿವು ಮೂಡಿಸಬೇಕು.
-
ಮಾರ್ಗ ತನಿಖಾ ಸಿಬ್ಬಂದಿಗಳು (Checking Inspectors) ಬಸ್‌ಗಳನ್ನು ಪರಿಶೀಲಿಸುವಾಗ, ಮೀಸಲಾತಿ ಸೀಟುಗಳಲ್ಲಿ ಹಿರಿಯ ನಾಗರಿಕರು/ವಿಶೇಷ ಚೇತನರೇ ಕುಳಿತಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಈ ಬಗ್ಗೆ ಕರಾರಸಾ ನಿಗಮ, ಬೆಂಮಸಾ ಸಂಸ್ಥೆ, ವಾಕರಸಾ ಸಂಸ್ಥೆ ಹಾಗೂ ಕಕರಸಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
2. ಹೆದ್ದಾರಿ ಹೋಟೆಲ್‌ಗಳ ದೋಚಾಟಕ್ಕೆ ಬ್ರೇಕ್: ನಿಯಮ ಮೀರಿದರೆ ಕರಾರು ರದ್ದು!
ದೂರದ ಮಾರ್ಗಗಳಲ್ಲಿ ಚಲಿಸುವ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಪ್ರಯಾಣಿಕರ ನೈಸರ್ಗಿಕ ಕರೆ, ಊಟ ಹಾಗೂ ಉಪಹಾರಕ್ಕಾಗಿ ಮಾರ್ಗ ಬದಿಯ ಹೋಟೆಲ್ ಅಥವಾ ಡಾಬಾಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಆದರೆ, ಇಂತಹ ಫಲಹಾರ ಮಂದಿರಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಸ್ವತಃ ಸಚಿವರಿಗೇ ಪ್ರಯಾಣಿಕರು ನೇರವಾಗಿ ಕರೆ ಮಾಡಿ ದೂರು ನೀಡಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಹೋಟೆಲ್‌ಗಳಲ್ಲಿ ಪ್ರಮುಖವಾಗಿ ಕೆಳಗಿನ ನ್ಯೂನ್ಯತೆಗಳು ಕಂಡುಬಂದಿವೆ:
-
ಶುದ್ಧ ಕುಡಿಯುವ ನೀರಿನ ಕೊರತೆ.
-
ಅತ್ಯಂತ ಕಡಿಮೆ ಗುಣಮಟ್ಟದ ತಿಂಡಿ ಮತ್ತು ತಿನಿಸುಗಳ ಸರಬರಾಜು.
-
ಅತ್ಯಂತ ಗಲೀಜಾದ, ಶುಚಿತ್ವವಿಲ್ಲದ ಶೌಚಾಲಯಗಳು.
-
ತಿಂಡಿ-ತಿನಿಸುಗಳು ಮತ್ತು ಊಟಕ್ಕೆ ನಿಗದಿಗಿಂತ ಹೆಚ್ಚಿನ ದರ ವಸೂಲಿ (ದೋಚಾಟ).
ಸಚಿವರ ಆದೇಶವೇನು?
-
ಕೇಂದ್ರ ಕಚೇರಿ ಮಟ್ಟದಲ್ಲಿ ವಿಶೇಷ ತಂಡಗಳ ರಚನೆ: ತಕ್ಷಣವೇ ಕೇಂದ್ರ ಕಚೇರಿ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಿ, ನಿಗಮದ ಬಸ್ಸುಗಳು ನಿಲ್ಲುವ ಎಲ್ಲಾ ಹೋಟೆಲ್/ಫಲಹಾರ ಮಂದಿರಗಳಿಗೆ ದಿಢೀರ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಬೇಕು.
-
ಪರಿಶೀಲನಾ ಅಂಶಗಳು: ಹೋಟೆಲ್‌ಗಳಲ್ಲಿ ಶುದ್ಧ ಕುಡಿಯುವ ನೀರು ಇದೆಯೇ?, ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ?, ಶೌಚಾಲಯಗಳು ಶುಚಿಯಾಗಿದ್ದಾವೆಯೇ? ಮತ್ತು ಊಟೋಪಹಾರಕ್ಕೆ ಸೂಕ್ತ ದರ ವಿಧಿಸಲಾಗುತ್ತಿದೆಯೇ? ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.
-
ಕರಾರು ರದ್ದು: ಒಂದು ವೇಳೆ ಪರಿವೀಕ್ಷಣೆ ಸಂದರ್ಭದಲ್ಲಿ ಯಾವುದೇ ನ್ಯೂನ್ಯತೆ ಅಥವಾ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವುದು ಕಂಡುಬಂದಲ್ಲಿ, ತಕ್ಷಣವೇ ಸದರಿ ಹೋಟೆಲ್‌ನ ಕರಾರು ಒಪ್ಪಂದವನ್ನು (Agreement) ರದ್ದುಗೊಳಿಸಿ, ಬದಲಿ ಸೂಕ್ತ ಹೋಟೆಲ್ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರಾರಸಾ ನಿಗಮ, ವಾಕರಸಾ ಸಂಸ್ಥೆ ಹಾಗೂ ಕಕರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕಡಕ್ ಸೂಚನೆ ನೀಡಿದ್ದಾರೆ.
ಸಾರಿಗೆ ಸಚಿವರ ಈ ಜನಪರ ನಿರ್ಧಾರಗಳಿಂದಾಗಿ ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಸೀಟಿನ ಭರವಸೆ ಸಿಗಲಿದ್ದು, ಹೆದ್ದಾರಿ ಹೋಟೆಲ್‌ಗಳ ದೋಚಾಟಕ್ಕೂ ಬ್ರೇಕ್ ಬೀಳಲಿದೆ.

ಬಿಜೆಪಿಗರ ಆರೋಪಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಖತ್ ತಿರುಗೇಟು: ಮಾರಿಕಾಂಬಾ ಜಾತ್ರೆಗೆ ₹2 ಕೋಟಿ ರಿಲೀಸ್!








