ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂಗಳದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕತ್ವದ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಎಂದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮಾಡಿದ್ದ ವಿನಂತಿಯನ್ನು ಫ್ರಾಂಚೈಸಿ ಅಧಿಕೃತವಾಗಿ ಒಪ್ಪಿಕೊಂಡಿದೆ. ಇದರೊಂದಿಗೆ ಪಂತ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಲಕ್ನೋ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಗೌರವಪೂರ್ವಕವಾಗಿ ಒಪ್ಪಿಕೊಂಡ ಫ್ರಾಂಚೈಸಿ
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಆಡಳಿತ ಮಂಡಳಿ, “ರಿಷಭ್ ಪಂತ್ ಅವರೇ ಸ್ವತಃ ಫ್ರಾಂಚೈಸಿಯನ್ನು ಸಂಪರ್ಕಿಸಿ ಈ ವಿನಂತಿ ಮಾಡಿಕೊಂಡಿದ್ದರು. ಅವರ ನಿರ್ಧಾರವನ್ನು ನಾವು ಗೌರವಪೂರ್ವಕವಾಗಿ ಸ್ವೀಕರಿಸಿದ್ದೇವೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ನಾಯಕನಾಗಿ ಈ ಡ್ರೆಸ್ಸಿಂಗ್ ರೂಮ್‌ಗೆ ರಿಷಭ್ ನೀಡಿದ ಕೊಡುಗೆಗೆ ನಾವು ಸದಾ ಕೃತಜ್ಞರಾಗಿರುತ್ತೇವೆ” ಎಂದು ತಿಳಿಸಿದೆ.
Official announcement. pic.twitter.com/7WeOwpkDr6
— Lucknow Super Giants (@LucknowIPL) May 29, 2026
ಮರುಸಂಘಟನೆಯತ್ತ ಲಕ್ನೋ ತಂಡದ ಗಮನ
ನಾಯಕತ್ವ ಬದಲಾವಣೆಯ ಬೆನ್ನಲ್ಲೇ ತಂಡದ ಮುಂದಿನ ನಡೆ ಬಗ್ಗೆಯೂ ಎಲ್‌ಎಸ್‌ಜಿ ಸ್ಪಷ್ಟನೆ ನೀಡಿದೆ. “ನಮ್ಮ ಸಂಪೂರ್ಣ ಗಮನ ಈಗ ತಂಡದ ಒಗ್ಗಟ್ಟಿನ ಮೇಲಿದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಪ್ರದರ್ಶನವನ್ನು ತಲುಪಲು ತಂಡವನ್ನು ಮರುಸಂಘಟನೆ ಹಾಗೂ ಪುನರ್ರಚನೆ (Rebuilding and Restructuring) ಮಾಡುವತ್ತ ನಾವು ಗಮನ ಹರಿಸುತ್ತಿದ್ದೇವೆ” ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ರಿಷಭ್ ಪಂತ್ ಅವರ ಈ ದಿಢೀರ್ ನಿರ್ಧಾರದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಸರಣಿಗಳಿಗೆ ಹೊಸ ನಾಯಕನನ್ನು ಹುಡುಕಬೇಕಾದ ಜವಾಬ್ದಾರಿ ಎದುರಾಗಿದ್ದು, ಐಪಿಎಲ್ ವಲಯದಲ್ಲಿ ಮುಂದಿನ ನಾಯಕ ಯಾರು ಎಂಬ ಕುತೂಹಲ ಮೂಡಿಸಿದೆ.
KSRTC ಬಸ್ ಪ್ರಯಾಣಿಕರ ದೂರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಸ್ಪಂದನೆ: ಈ ಖಡಕ್ ಆದೇಶ
ಬಿಜೆಪಿಗರ ಆರೋಪಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಖತ್ ತಿರುಗೇಟು: ಮಾರಿಕಾಂಬಾ ಜಾತ್ರೆಗೆ ₹2 ಕೋಟಿ ರಿಲೀಸ್!








