ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯದ ಮುಂದಿನ ಸಾರಥಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ತಮ್ಮ ಆಪ್ತ ಜ್ಯೋತಿಷಿಗಳ ಸಲಹೆಯ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ಮುಂದಿನ ತಿಂಗಳು ಅಂದರೆ ಜೂನ್ 5 ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ರಾಜಕೀಯ ಬದಲಾವಣೆಯ ಈ ಹೊತ್ತಿನಲ್ಲಿ, ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಮುಹೂರ್ತದ ಕುರಿತಾದ ಸಂಪೂರ್ಣ ವಿವರಗಳು ಹೀಗಿವೆ:
ಜೂನ್ 5ರ ಶುಕ್ರವಾರ ಮಧ್ಯಾಹ್ನ ‘ಅಭಿಜಿನ್ ಲಗ್ನ’ದಲ್ಲಿ ಪದಗ್ರಹಣ
ಭಾವಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಜೂನ್ 5ನೇ ತಾರೀಖಿನ ಶುಕ್ರವಾರದಂದು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಅವರು ಸೋಮವಾರ ಅಥವಾ ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಡಿಕೆಶಿ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ವಿಶೇಷ ಸಲಹೆಯಂತೆ, ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಬರಲಿರುವ ಶುಭ ‘ಅಭಿಜಿನ್ ಲಗ್ನ’ದಲ್ಲಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಪಡಿಸಲಾಗಿದೆ ಎನ್ನಲಾಗಿದೆ.
ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ವಾಸ್ತು ಬದಲಾವಣೆ: ಎಕ್ಸಿಟ್ ಗೇಟ್ ಇನ್ಮುಂದೆ ಎಂಟ್ರಿ ಗೇಟ್!
ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ವಸತಿ ಗೃಹವಾಗಲಿರುವ ‘ಕುಮಾರಕೃಪಾ ಗೆಸ್ಟ್‌ಹೌಸ್’ನ ಕಲ್ಲು ಬಿಲ್ಡಿಂಗ್‌ನಲ್ಲಿ ಸದ್ಯ ಭರದಿಂದ ನವೀಕರಣ ಕಾರ್ಯಗಳು ಸಾಗುತ್ತಿವೆ. ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ಸಲಹೆಯಂತೆ, ದೇವ ಮೂಲೆಯಿಂದಲೇ ವಸತಿ ಗೃಹಕ್ಕೆ ಪ್ರವೇಶ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕುಮಾರಕೃಪಾದ ‘ಎಕ್ಸಿಟ್ ಪಾಯಿಂಟ್’ (ಹೊರಹೋಗುವ ದಾರಿ) ಅನ್ನು ಇನ್ಮುಂದೆ ‘ಎಂಟ್ರಿ ಗೇಟ್’ (ಪ್ರವೇಶ ದ್ವಾರ) ಆಗಿ ಬದಲಾಯಿಸಲು ಡಿಕೆಶಿ ಸೂಚಿಸಿದ್ದಾರೆ. ಈಗಾಗಲೇ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರು ಜ್ಯೋತಿಷಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ
ಡಿ.ಕೆ. ಶಿವಕುಮಾರ್ ಅವರು ಕಂಠೀರವ ಕ್ರೀಡಾಂಗಣ ಅಥವಾ ರಾಜ್‌ಭವನದಲ್ಲಿ ಅಲ್ಲದೆ, ವಿಧಾನಸೌಧದ ಭವ್ಯ ಮುಂಭಾಗದ ಮೆಟ್ಟಿಲುಗಳ ಮೇಲೆ (Grand Steps) ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಈ ಭವ್ಯ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸ್ವತಃ ಡಿಕೆಶಿ ಅವರೇ ರಾಜ್ಯ ಮುಖ್ಯ ಕಾರ್ಯದರ್ಶಿಗೆ (Chief Secretary) ದೂರವಾಣಿ ಕರೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹೊಸ ಸಚಿವರು
ಜೂನ್ 5 ರಂದು ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರೊಂದಿಗೆ ಹೊಸ ಸಂಪುಟದ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸಚಿವರ ಸಂಖ್ಯೆಯ ಬಗ್ಗೆ ಎರಡು ವಿಭಿನ್ನ ವರದಿಗಳು ಕೇಳಿಬರುತ್ತಿವೆ. ಒಂದು ಮೂಲಗಳ ಪ್ರಕಾರ ಡಿಕೆಶಿ ಜೊತೆಗೆ 7 ಮಂದಿ ಹಿರಿಯ ಮತ್ತು ಅನುಭವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಮೂಲಗಳ ಪ್ರಕಾರ 12 ರಿಂದ 13 ಮಂದಿ ನೂತನ ಸಚಿವರು ಮೊದಲ ಹಂತದಲ್ಲೇ ಕ್ಯಾಬಿನೆಟ್ ಸೇರಲಿದ್ದಾರೆ ಎಂದು ವರದಿಯಾಗಿದೆ.
ಹಸುಗೂಸಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ‘ಆರ್ಮಿ ವೈದ್ಯ’ರು: ಸಾವಿನ ದವಡೆಯಿಂದ ‘9 ತಿಂಗಳ ಮಗು’ ಪಾರು








