ಭಾರತೀಯ ಕುಸ್ತಿ ಫೆಡರೇಶನ್ (WFI) ದೆಹಲಿ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದೆ. ಈ ಆದೇಶವು ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಶನಿವಾರ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ನ ಆಯ್ಕೆ ಟ್ರಯಲ್ಸ್ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು.
ತನ್ನ ವಿಶೇಷ ಮೇಲ್ಮನವಿ ಅರ್ಜಿಯಲ್ಲಿ (SLP), ಮೇ 22ರಂದು ನೀಡಲಾದ ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠದ ಆದೇಶವು “ಮೇಲ್ನೋಟಕ್ಕೆ ಕಾನೂನುಬಾಹಿರ” ಎಂದು WFI ಬಣ್ಣಿಸಿದೆ. ವಿನೇಶ್ ಪರವಾಗಿ ನಿರ್ದೇಶನಗಳನ್ನು ನೀಡುವ ಮೊದಲು ಫೆಡರೇಶನ್ಗೆ ವಿವರವಾದ ಉತ್ತರವನ್ನು ಸಲ್ಲಿಸಲು ಸೂಕ್ತ ಅವಕಾಶ ನೀಡಿಲ್ಲ ಎಂದು ಅದು ವಾದಿಸಿದೆ.
ಅಯಿಚಿ-ನಾಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನ ಟ್ರಯಲ್ಸ್ನಲ್ಲಿ ವಿನೇಶ್ ಫೋಗಟ್ ಅವರು ಪ್ರಕಟಿತ ಆಯ್ಕೆ ಮಾನದಂಡಗಳ ಪ್ರಕಾರ “ಅನರ್ಹ”ರಾಗಿದ್ದರೂ, ಅವರನ್ನು ಸೇರಿಸಿಕೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ಫೆಡರೇಶನ್ ಆರೋಪಿಸಿದೆ. ಅಂತರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳ ಆಯ್ಕೆಯು ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಫೆಡರೇಶನ್ನ ವಿಶೇಷ ಅಧಿಕಾರವಾಗಿದೆ ಎಂದು ವಾದಿಸಿರುವ WFI, ಕ್ರೀಡಾ ಆಯ್ಕೆಯ ವಿಷಯಗಳಲ್ಲಿ “ನ್ಯಾಯಾಂಗದ ಅತಿಕ್ರಮಣ” (Judicial overreach) ನಡೆಯದಂತೆ ಎಚ್ಚರಿಕೆ ನೀಡಿದೆ.
ಈ ವಿವಾದದ ಹಿನ್ನೆಲೆಯನ್ನು ವಿವರಿಸಿರುವ ಫೆಡರೇಶನ್, ವಿನೇಶ್ ಅವರು ಡಿಸೆಂಬರ್ 2024ರಲ್ಲಿ ಇಂಟರ್ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ITA) ಪತ್ರ ಬರೆಯುವ ಮೂಲಕ ಸ್ವಯಂಪ್ರೇರಿತವಾಗಿ ಕುಸ್ತಿಯಿಂದ ನಿವೃತ್ತಿ ಹೊಂದಿದ್ದರು ಎಂದು ತಿಳಿಸಿದೆ.
ಅರ್ಜಿಯ ಪ್ರಕಾರ, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW) ಡೋಪಿಂಗ್ ವಿರೋಧಿ ನಿಯಮಗಳು ಮತ್ತು WADA ಕೋಡ್ನ ಅಡಿಯಲ್ಲಿ, ನಿವೃತ್ತಿಯಿಂದ ಹಿಂದಿರುಗುವ ಕ್ರೀಡಾಪಟು ಸ್ಪರ್ಧಿಸಲು ಅರ್ಹರಾಗುವ ಮೊದಲು ಕಡ್ಡಾಯವಾಗಿ ಆರು ತಿಂಗಳ ಕಾಲ ‘ವೇರ್ ಅಬೌಟ್ಸ್’ ಮತ್ತು ಡೋಪಿಂಗ್ ಪರೀಕ್ಷೆಗೆ ಒಳಗಾಗಬೇಕು. ಅಲ್ಲದೆ, ಡಿಸೆಂಬರ್ 18, 2025ರಂದು ಪರೀಕ್ಷೆಗೆ ವಿಫಲವಾದ ಪ್ರಯತ್ನಕ್ಕೆ ಸಂಬಂಧಿಸಿದಂತೆ, ಮೇ 4ರಂದು ವಿನೇಶ್ ವಿರುದ್ಧ “ದಾಖಲಾದ ಮಿಸ್ಡ್ ಟೆಸ್ಟ್” ಇದೆ ಎಂದು ಫೆಡರೇಶನ್ ಉಲ್ಲೇಖಿಸಿದೆ. ಈ ಕುರಿತು ಮೇ 9ರಂದು ಅವರಿಗೆ ನೋಟಿಸ್ ನೀಡಲಾಗಿದೆ. ಕುಸ್ತಿಪಟುವಿನ ವಿರುದ್ಧ ಶಿಸ್ತುಕ್ರಮ ಬಾಕಿಯಿದ್ದು, ಅದನ್ನು ಅದರ “ತಾರ್ಕಿಕ ಅಂತ್ಯ” ತಲುಪಲು ಬಿಡಬೇಕೆಂದು ಫೆಡರೇಶನ್ ವಾದಿಸಿದೆ.
ಫೆಬ್ರವರಿ 2026ರಲ್ಲಿ ಪ್ರಕಟವಾದ ಆಯ್ಕೆ ನೀತಿಯಲ್ಲಿ “ಐಕಾನಿಕ್ ಪ್ಲೇಯರ್” ಅಥವಾ “ತಾಯ್ತನದ ಆಧಾರದ ಮೇಲೆ ವಿನಾಯಿತಿ”ಗೆ ಯಾವುದೇ ಅವಕಾಶವಿಲ್ಲ ಎಂದು ಫೆಡರೇಶನ್ ಸ್ಪಷ್ಟಪಡಿಸಿದೆ. ಆಯ್ಕೆಗಳು ಯಾವಾಗಲೂ ಅರ್ಹತೆ ಮತ್ತು ಪ್ರದರ್ಶನದ ಆಧಾರದ ಮೇಲೆ ನಡೆದಿವೆ ಎಂದು ಅದು ಹೇಳಿದೆ. ಪ್ರತಿಯೊಂದು ವಿಭಾಗದಲ್ಲಿ 12 ಕುಸ್ತಿಪಟುಗಳು ರಾಷ್ಟ್ರೀಯ ಚಾಂಪಿಯನ್ಶಿಪ್ಗಳ ಮೂಲಕ ಈಗಾಗಲೇ ಅರ್ಹತೆ ಪಡೆದಿದ್ದು, ಹೈಕೋರ್ಟ್ ಆದೇಶ ಹೊರಡಿಸುವ ಮುನ್ನ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು WFI ವಾದಿಸಿದೆ. ಅಲ್ಲದೆ, ಏಷ್ಯನ್ ಗೇಮ್ಸ್ನ ಮಾನ್ಯತೆ ಪಡೆಯುವ ಗಡುವು ಮೇ 14ರಂದೇ ಮುಗಿದಿರುವುದರಿಂದ, ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೆ ತರುವುದು ಕಷ್ಟ ಎಂದು ಫೆಡರೇಶನ್ ತಿಳಿಸಿದೆ.
ವಿನೇಶ್ ಅವರು ಕಮ್ಬ್ಯಾಕ್ ನಂತರ ಭಾಗವಹಿಸಬೇಕಿದ್ದ ಮೊದಲ ರಾಷ್ಟ್ರೀಯ ಓಪನ್ ರಾಂಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದ ನಂತರ, ಟ್ರಯಲ್ಸ್ನಲ್ಲಿ ಸ್ಪರ್ಧಿಸಲು ಅನುಮತಿ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ WFI ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ವಿನೇಶ್ ಮೊದಲು ನ್ಯಾಯಾಲಯದಿಂದ ಪರಿಹಾರ ಪಡೆಯಲು ವಿಫಲರಾಗಿದ್ದರು, ನಂತರ ಸಲ್ಲಿಸಿದ ಮೇಲ್ಮನವಿಯ ಮೇರೆಗೆ, ದೆಹಲಿ ಹೈಕೋರ್ಟ್ ವಿನೇಶ್ ಫೋಗಟ್ ಅವರಿಗೆ ಮೇ 30ರಂದು ದೆಹಲಿಯಲ್ಲಿ ನಡೆಯಲಿರುವ ಟ್ರಯಲ್ಸ್ನಲ್ಲಿ ಸ್ಪರ್ಧಿಸಲು ಅನುಮತಿ ನೀಡುವಂತೆ WFIಗೆ ನಿರ್ದೇಶಿಸಿತ್ತು.







