ಹಮೀರ್ಪುರ: ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಭೀಕರ ದುರಂತದಲ್ಲಿ, ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾರೀ ಮಳೆ ಮತ್ತು ಬಿರುಗಾಳಿಯ ನಡುವೆ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಶುಕ್ರವಾರ ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆತ್ವಾ ನದಿಯ ಮೇಲೆ ನಿರ್ಮಿಸಲಾಗುತ್ತಿದ್ದ ಈ ಸೇತುವೆಯ ಒಂದು ಭಾಗವು ಆಕಸ್ಮಿಕವಾಗಿ ಕುಸಿದಿದೆ. ಆ ಸಮಯದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸೇತುವೆಯ ಮೇಲೆಯೇ ವಿಶ್ರಾಂತಿ ಪಡೆಯುತ್ತಿದ್ದರು, ಹೀಗಾಗಿ ಅವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಸಾವು-ನೋವು: ಪ್ರಾಥಮಿಕ ವರದಿಯ ಪ್ರಕಾರ, ಈವರೆಗೆ ಆರು ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಆತಂಕವಿದೆ. ಮೃತರನ್ನು ಲೋಕೇಂದ್ರ, ಕುಲದೀಪ್ ನಿಶಾದ್, ಸಾವಂತ್ ಯಾದವ್, ಸಭಾಜಿತ್, ಪುಷ್ಪೇಂದ್ರ ಸಿಂಗ್ ಚೌಹಾಣ್ ಮತ್ತು ರಾಜೇಶ್ ಪಾಲ್ ಎಂದು ಗುರುತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಮತ್ತು ಆಡಳಿತ ಮಂಡಳಿ ಧಾವಿಸಿದ್ದು, ಎಸ್ಡಿಆರ್ಎಫ್ (SDRF) ತಂಡದ ನೆರವಿನೊಂದಿಗೆ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಣ್ಣಿನಡಿ ಸಿಲುಕಿರುವ ಇತರ ಕಾರ್ಮಿಕರನ್ನು ರಕ್ಷಿಸಲು ಹರಸಾಹಸ ಪಡಲಾಗುತ್ತಿದೆ.
ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ನಿರ್ಮಾಣ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಮತ್ತು ಕಾರ್ಮಿಕರನ್ನು ಅಪಾಯಕಾರಿ ಸ್ಥಿತಿಯಲ್ಲಿ ಉಳಿಯುವಂತೆ ಮಾಡಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸೇತುವೆಯು ಕುರಾರಾದ ಮೊರ್ಕಂದರ್ ಪರ್ಸಾನಿಯಿಂದ ನೈಥಿ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿತ್ತು.







