ಶಿವಮೊಗ್ಗ: 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಜೂನ್ 1ರಿಂದ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸದಾನಂದ ಸ್ವಾಮಿ ಅವರು ಕರೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಅಜಿತ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಆರಂಭಕ್ಕೂ ಮುನ್ನವೇ ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ಶಾಲೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಗುಣಾತ್ಮಕ ಶಿಕ್ಷಣ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ
ಮುಖ್ಯಶಿಕ್ಷಕರ ಜವಾಬ್ದಾರಿಗಳನ್ನು ನೆನಪಿಸಿದ ಬಿಇಒ, “ಮುಖ್ಯಶಿಕ್ಷಕರಿಗೆ ಶೈಕ್ಷಣಿಕವಾಗಿ ವಿಶೇಷ ಜವಾಬ್ದಾರಿಗಳಿವೆ. ಸ್ಥಳೀಯ ಸಮುದಾಯದ ಸಹಭಾಗಿತ್ವವನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ತಮ್ಮ ತಮ್ಮ ಶಾಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳ ಹಿತ ಕಾಯುವ ಜೊತೆಗೆ ಶಾಲಾ ಆವರಣದ ಸ್ವಚ್ಛತೆ ಹಾಗೂ ಹಸಿರಿನ ಬಗ್ಗೆ ವಿಶೇಷ ಗಮನ ಹರಿಸಿ, ಕಲಿಕೆಗೆ ಪೂರಕವಾದ ಆಹ್ಲಾದಕರ ವಾತಾವರಣ ನಿರ್ಮಿಸಬೇಕು” ಎಂದು ತಿಳಿಸಿದರು.
ಮಕ್ಕಳ ಶೈಕ್ಷಣಿಕ ಹಕ್ಕಿಗೆ ಚ್ಯುತಿ ಬಂದರೆ ಕಠಿಣ ಕ್ರಮ
ಇದೇ ವೇಳೆ ಕಠಿಣ ಎಚ್ಚರಿಕೆ ನೀಡಿದ ಸದಾನಂದ ಸ್ವಾಮಿ ಅವರು, “ಯಾವುದೇ ಕಾರಣಕ್ಕೂ ಮಕ್ಕಳ ಶೈಕ್ಷಣಿಕ ಹಕ್ಕುಗಳಿಗೆ ಚ್ಯುತಿ ಬರುವಂತೆ ನಡೆದುಕೊಂಡರೆ ಇಲಾಖೆ ಸಹಿಸುವುದಿಲ್ಲ ಹಾಗೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಸವಾಲುಗಳ ನಡುವೆಯೂ ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಶ್ರಮ
ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾಲತೇಶ್ ಮಾತನಾಡಿ, “ಶಿಕ್ಷಕರ ಮೇಲೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಣೆಗಾರಿಕೆ ಹಾಗೂ ಸವಾಲುಗಳಿವೆ. ಸಾಗರ ತಾಲ್ಲೂಕಿನಲ್ಲಿ ಅತ್ಯಂತ ಪ್ರತಿಭಾವಂತ ಶಿಕ್ಷಕರ ತಂಡವೇ ಇದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಫಲಿತಾಂಶ ತರಲು ಅವಿರತವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಶಿಕ್ಷಕರನ್ನು ಸಮಾಜವು ಸದಾ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹೀಗಾಗಿ ನಾವು ಸಮಾಜಕ್ಕೆ ಮಾದರಿಯಾಗಿ ಬದುಕುವ ಪಥವನ್ನು ರೂಪಿಸಿಕೊಳ್ಳಬೇಕು. ಮಕ್ಕಳನ್ನು ಸುಸಂಸ್ಕೃತರಾಗಿ ಹಾಗೂ ವ್ಯವಸ್ಥಿತವಾಗಿ ರೂಪಿಸುವ ಜವಾಬ್ದಾರಿ ನಮ್ಮದಾಗಿದೆ” ಎಂದರು.
ಈ ವೇಳೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಭೂಮೇಶ್, ಸಮನ್ವಯಾಧಿಕಾರಿ ಡಾ. ಅನ್ನಪೂರ್ಣ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಭೂಕೇಶ್ವರಪ್ಪ, ಸೇವಾಸಾಗರ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ, ಗೌರಿಭಟ್, ಕುಮಾರಸ್ವಾಮಿ, ದಿನೇಶ್ ಹಾಗೂ ವಿ.ಟಿ. ಸ್ವಾಮಿ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.
ಮೇ.30ರಂದು ಸಾಗರದಲ್ಲಿ ‘ಅವ್ವಸಂತೆ-20’: ಕೈಮಗ್ಗ, ಸಾವಯವ ಉತ್ಪನ್ನಗಳು ಹಾಗೂ ಆಹಾರ ಮೇಳದ ಜುಗಲ್‌ಬಂದಿ!
ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು ಮಾಜಿ ಸಿಎಂ ಎಸ್.ಎಂ.ಕೃಷ್ಣ: ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ








