ಮಂಡ್ಯ : ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಸರ್ವೆ ಜನಾಂಗದ ಶಾಂತಿಯ ತೋಟವಾಗಿರುವ ಬೆಂಗಳೂರು ನಗರಕ್ಕೆ ಆಧುನಿಕ ಸ್ಪರ್ಶ ನೀಡಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಬಣ್ಣಿಸಿದರು.
ಮದ್ದೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಆವರಣದಲ್ಲಿ ಬುಧವಾರ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ನಡೆದ ಎಸ್.ಎಂ.ಕೃಷ್ಣ ರವರ 94 ನೇ ಜನ್ಮ ದಿನೋತ್ಸವ ಮತ್ತು ಸಂಸ್ಮರಣೆ ಹಾಗೂ ಎಸ್.ಎಂ.ಕೃಷ್ಣ ಆಡಳಿತ ಸೇವಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಅಭಿನಂದನಾ ಭಾಷಣ ಮಾಡಿ ಅವರು ಮಾತನಾಡಿದರು.
ದಿ.ಎಸ್.ಎಂ.ಕೃಷ್ಣ ರವರು ನಮ್ಮ ಮಂಡ್ಯ ಜಿಲ್ಲೆಯು ಕಂಡಂತಹ ಮಹಾನ್ ಮೇರು ನಾಯಕರಾಗಿದ್ದವರು. ಪ್ರಜಾಪ್ರಭುತ್ವದಲ್ಲಿ ನಾಲ್ಕು ಸದನಗಳಿವೆ ಈ ಎಲ್ಲಾ ಸದನಗಳಲ್ಲೂ ನಿಷ್ಪಕ್ಷಪಾತವಾಗಿ ಆಡಳಿತ ನಡೆಸಿ ಯಾವುದೇ ಒಂದು ಕಪ್ಪು ಚುಕ್ಕೆ ಬರೆದ ರೀತಿ ಕಾರ್ಯ ನಿರ್ವಹಿಸಿ ಅಜಾತಶತ್ರು ಎನಿಸಿಕೊಂಡವರು.
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬೆಂಗಳೂರನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿಯ ಫಲವಾಗಿ ಇಂದು ಸಿಲಿಕಾನ್ ಸಿಟಿ, ಉದ್ಯಾನ ನಗರಿಯಲ್ಲಿ 26 ಲಕ್ಷ ಮಂದಿ ದೇಶ ವಿದೇಶಗಳಿಂದ ಬಂದು ಸಾಫ್ಟವೇರ್ ಇಂಜನಿಯರ್ ಗಳು ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೇವಲ ಐದು ವರ್ಷಗಳ ಅವಧಿಯಲ್ಲಿ ನೀರಾವರಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಬೆಂಗಳೂರಿನಲ್ಲಿ ಐಟಿ,ಬಿಟಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಪಹಣಿ, ಯಶಸ್ವಿನಿ, ಬಿಸಿಯೂಟ ಯೋಜನೆ, ಮೈಸೂರು – ಬೆಂಗಳೂರು ಹೆದ್ದಾರಿ ಮೇಲ್ದರ್ಜೆ ಸೇರಿದಂತೆ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಅಷ್ಟೇ ಅಲ್ಲದೇ ಎಸ್.ಎಂ.ಕೃಷ್ಣ ರವರು ತವರು ಕ್ಷೇತ್ರವಾದ ಮದ್ದೂರಿನ ಅಭಿವೃದ್ಧಿಗೂ ಹೆಚ್ಚು ಅನುದಾನವನ್ನು ನೀಡುವುದರ ಮೂಲಕ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳು, ಪಟ್ಟಣಕ್ಕೆ ಕಾವೇರಿಯಿಂದ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಸಾಕ್ಷಿ ಗುಡ್ಡೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಸ್ಮರಿಸಿದರು.
ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ ಕೃಷ್ಣ ರವರು ಈ ನಾಡು, ದೇಶ ಕಂಡ ಅ ದ್ವಿತೀಯ ರಾಜಕಾರಣಿಯಾಗಿದ್ದರು.ಕೇಂದ್ರ ವಿದೇಶಾoಗ ಸಚಿವರೂ ಆಗಿದ್ದ ಅವರಿಗೆ ಪ್ರಧಾನಿ ಸ್ಥಾನ ತಪ್ಪಿದ ನೋವು ಇಂದಿಗೂ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ರವರು ಬೆಂಗಳೂರನ್ನು ಜಾಗತಿಕವಾಗಿ, ಆರ್ಥಿಕವಾಗಿ ಹೆಚ್ಚು ಬಲಿಷ್ಠಗೊಳಿಸಿದವರು. ರಾಜ್ಯ, ದೇಶ ಅಷ್ಟೇ ಅಲ್ಲದೇ ವಿದೇಶದಲ್ಲೂ ತನ್ನ ಜ್ಞಾನ ಹಾಗೂ ಆಡಳಿತ ವೈಖರಿಯಿಂದ ತನ್ನದೇ ಆದ ಹೆಸರುಗಳಿಸಿದ್ದರು. ಅವರ ಕೀರ್ತಿ ಹಾಗೂ ಆಡಳಿತದಲ್ಲಿನ ಸಾಧನೆಗಳನ್ನು ನೆನಪಿನಲ್ಲಿಡುವ ನಿಟ್ಟಿನಲ್ಲಿ ಚುಂಚಶ್ರೀ ಗೆಳೆಯರ ಬಳಗದ ವತಿಯಿಂದ ಕೊಡಮಾಡುವ ಎಸ್.ಎಂ.ಕೃಷ್ಣ ಆಡಳಿತ ಸೇವಾ ರತ್ನ ಪ್ರಶಸ್ತಿಯನ್ನು ಒಬ್ಬ ಸಾಮಾನ್ಯ ರೈತನ ಮಗನಾಗಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಮೊದಲ ಬಾರಿ ಆಯ್ಕೆಯಾಗಿದ್ದರೂ ಐದಾರು ಬಾರಿ ಚುನಾಯಿತರಾದವರಿಗಿಂತ ಹೆಚ್ಚು ಅತ್ಯಂತ ಕ್ರಿಯಾಶೀಲ ಶಾಸಕರೆಂದು ಹೆಸರುಗಳಿಸಿರುವ ಕೆ.ಎಂ.ಉದಯ್ ಅವರಿಗೆ ನೀಡುತ್ತಿರುವುದು ಪ್ರಶಂಸನೀಯ ಎಂದರು.
ಮುಂದಿನ ನವೆಂಬರ್ 1 ರ ಒಳಗೆ ದಿ.ಎಸ್.ಎಂ. ಕೃಷ್ಣ ರವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರವು ನೀಡಬೇಕು ಈ ದಿಸೆಯಲ್ಲಿ ಮದ್ದೂರಿನ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಹಾಗೂ ಅವರ ಪ್ರತಿಮೆಯನ್ನು ವಿಧಾನಸೌಧ ಅಥವಾ ವಿಕಾಸ ಸೌಧದ ಎದುರು ನಿರ್ಮಿಸುವಂತಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆಡಳಿತ ಸೇವಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಶಾಸಕ ಕೆ.ಎಂ.ಉದಯ್ ಮಾತನಾಡಿ, ಎಸ್.ಎಂ.ಕೃಷ್ಣರವರು ಈ ದೇಶದ ಪ್ರಧಾನಿಯಾಗಿದ್ದರೆ ಅಭಿವೃದ್ಧಿಯ ವಿಷಯದಲ್ಲಿ ಕನಿಷ್ಠ 20 ವರ್ಷವಾದರೂ ದೇಶ ಅಭಿವೃದ್ಧಿ ಮುಂದೆ ಹೋಗುತ್ತಿತ್ತು. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆದಿರುವುದರಿಂದ ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಕೃಷ್ಣ ರವರು ಮಿತವಾಗಿ ಮಾತನಾಡುತ್ತಿದ್ದರು ಆದರೆ ಹೆಚ್ಚು ಕೆಲಸ ಮಾಡುತ್ತಿದ್ದರು, ಅವರ ಮೇರು ವ್ಯಕ್ತಿತ್ವಕ್ಕೆ ಅವರೇ ಸಾಟಿಯಾಗಿದ್ದರು. ಅವರು ಪಾಲಿಸುತ್ತಿದ್ದ ಶಿಸ್ತು, ಸಂಯಮ, ಸಮಯಪ್ರಜ್ಞೆಯನ್ನು ನಾವುಗಳು ಅನುಸರಿಸಬೇಕು, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ನಾನು ಶಾಸಕನ್ನಾಗಿದ್ದೇನೆ ಎಂಬುದೇ ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ನೆನೆದರು.
ಮದ್ದೂರಿನ ತಾಲ್ಲೂಕಿನ ಚುನಾಯಿತ ಜನಪ್ರತಿನಿಧಿಗಳು ಹಾಗೂ ಶಿಕ್ಷಣದ ಮುನ್ನೋಟ ಗ್ರಂಥವನ್ನು ಇದೇ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಕೃಷ್ಣ, ಹಿರಿಯ ಸಾಹಿತಿಗಳಾದ ಜಯಪ್ರಕಾಶ್ ಗೌಡ, ತೈಲೂರು ವೆಂಕಟಕೃಷ್ಣ, ಮಂಡ್ಯದ ನಿವೃತ್ತ ಪ್ರಾoಶುಪಾಲ ಶಂಕರೇಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer








