ಶಿವಮೊಗ್ಗ: ಸ್ಥಳೀಯ ಉಪವಿಭಾಗೀಯ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆ ಮತ್ತು ಕನಿಷ್ಠ ಮೂಲಭೂತ ಸೌಲಭ್ಯಗಳ ಲೋಪವನ್ನು ಖಂಡಿಸಿ, ನಾಗರೀಕ ವೇದಿಕೆ ವತಿಯಿಂದ ಮಂಗಳವಾರ ವೈದ್ಯಾಧಿಕಾರಿಗಳಿಗೆ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು. ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ಎಚ್ಚರಿಸಿದೆ.
ಶಾಸಕರ ಘೋಷಣೆಗಳು ಕೇವಲ ಕಾಗದದ ಮೇಲಿವೆ: ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ನಾಗರೀಕ ವೇದಿಕೆಯ ಅಧ್ಯಕ್ಷರಾದ ಎಂ. ರಾಜಶೇಖರ್, “ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಬಡ ರೋಗಿಗಳು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಶಾಸಕರು ಪ್ರತಿ ಸಭೆಯಲ್ಲೂ ವೈದ್ಯರ ನೇಮಕ ಹಾಗೂ ಆಸ್ಪತ್ರೆಗೆ ಕೋಟ್ಯಂತರ ಅನುದಾನ ಬರುತ್ತಿದೆ ಎಂದು ಹೇಳುತ್ತಾರೆಯೇ ವಿನಃ, ಅದ್ಯಾವುದೂ ಇಂದಿನವರೆಗೂ ಅನುಷ್ಠಾನಕ್ಕೆ ಬಂದಂತೆ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವ ಬಡ ರೋಗಿಗಳು: ಆಸ್ಪತ್ರೆಯ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ರಾಜಶೇಖರ್, “ಇಲ್ಲಿನ ಎಕ್ಸ್ರೇ ಯಂತ್ರಗಳು ಅತ್ಯಂತ ಹಳೆಯದಾಗಿದ್ದು, ನಿಖರವಾದ ವರದಿ ಬರುತ್ತಿಲ್ಲ. ಆಸ್ಪತ್ರೆಗೆ ಹೊಸ ತಂತ್ರಜ್ಞಾನದ ಸಿ.ಟಿ. ಸ್ಕ್ಯಾನಿಂಗ್ ಹಾಗೂ ಯುಎಸ್ಬಿ ಸ್ಕ್ಯಾನಿಂಗ್ ಸೌಲಭ್ಯಗಳನ್ನು ಕಲ್ಪಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. ದಂತ ವೈದ್ಯರು, ಚರ್ಮರೋಗ ತಜ್ಞರು ಸೇರಿದಂತೆ ಹಲವು ಪ್ರಮುಖ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ರೋಗಿಗಳು ಹಣ ತೆತ್ತು ಖಾಸಗಿ ಆಸ್ಪತ್ರೆಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ” ಎಂದು ದೂರಿದರು.
ಸ್ಟ್ರೆಚರ್ ತಳ್ಳುವ ಸ್ಥಿತಿಯಲ್ಲಿ ರೋಗಿಗಳ ಸಂಬಂಧಿಕರು: “ಆಸ್ಪತ್ರೆಯಲ್ಲಿ ನರ್ಸ್ಗಳು ಹಾಗೂ ಗ್ರೂಪ್ ‘ಡಿ’ ನೌಕರರ ಸಂಖ್ಯೆಯೂ ತೀರಾ ಕಡಿಮೆಯಿದೆ. ರೋಗಿಗಳ ಸಂಬಂಧಿಕರೇ ಸ್ಟ್ರೆಚರ್ ಹಾಗೂ ವೀಲ್ಚೇರ್ಗಳನ್ನು ತಳ್ಳಿಕೊಂಡು ಹೋಗಬೇಕಾದ ಕರುಣಾಜನಕ ಸ್ಥಿತಿ ಇಲ್ಲಿದೆ. ಇಷ್ಟೊಂದು ನೌಕರರ ಕೊರತೆ ಇದ್ದರೂ, ಇರುವ ಕೆಲವೇ ಕೆಲವು ಗ್ರೂಪ್ ‘ಡಿ’ ಸಿಬ್ಬಂದಿಯನ್ನು ಬೇರೆ ಬೇರೆ ಕಡೆಗೆ ಸೇವೆಗೆ ನಿಯೋಜನೆ ಮಾಡಿರುವುದು ಸರಿಯಲ್ಲ. ತಕ್ಷಣವೇ ಕೊರತೆ ಇರುವ ವೈದ್ಯರನ್ನು ನೇಮಿಸಿ, ಅಗತ್ಯ ಔಷಧಿ ಹಾಗೂ ಯಂತ್ರೋಪಕರಣಗಳನ್ನು ಒದಗಿಸಬೇಕು. ಇಲ್ಲದಿದ್ದರೆ ನಾಗರೀಕ ವೇದಿಕೆ ವತಿಯಿಂದ ಉಗ್ರ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಗರೀಕ ವೇದಿಕೆಯ ಪ್ರಮುಖರಾದ ಮಂಜಪ್ಪ ಗಾಂಧಿನಗರ, ರವಿ ಜಂಬಗಾರು, ಸತೀಶ್ ಗೌಡ, ಲೋಕೇಶ್, ಸುರೇಶ್ ಮಂಡ್ಯ, ಅಣ್ಣಪ್ಪ, ಕೃಷ್ಣಮೂರ್ತಿ, ಉಮೇಶ್ ಶುಂಠಿಕೊಪ್ಪ, ಶೇಖರ, ಸುರೇಶ್ ಕಾರ್ಗಲ್, ಅಣ್ಣಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.








