ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಬಹುನಿರೀಕ್ಷಿತ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ”ಯನ್ನು (ಜಾತಿ ಜನಗಣತಿ ವರದಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಸ್ವೀಕರಿಸಿದರು.
ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂಧನ್ ಆರ್. ನಾಯಕ್ ಅವರು ಮುಖ್ಯಮಂತ್ರಿಗಳಿಗೆ ವರದಿಯನ್ನು ಹಸ್ತಾಂತರಿಸಿದರು.
ಹಿರಿಯ ಸಚಿವರು ಹಾಗೂ ಗಣ್ಯರ ಉಪಸ್ಥಿತಿ: ವರದಿ ಸ್ವೀಕರಿಸುವ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ಸಚಿವರುಗಳು ಹಾಗೂ ಶಾಸಕರು ಉಪಸ್ಥಿತರಿದ್ದು, ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು. ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ. ಮಹದೇವಪ್ಪ, ಎಂ.ಸಿ. ಸುಧಾಕರ್, ಸತೀಶ್ ಜಾರಕಿಹೊಳಿ, ಚಲುವರಾಯಸ್ವಾಮಿ, ಶಾಸಕರುಗಳಾದ ಕೋನರೆಡ್ಡಿ, ನರೇಂದ್ರಸ್ವಾಮಿ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು ಉಪಸ್ಥಿತರಿದ್ದರು.
ಆಯೋಗದ ಪದಾಧಿಕಾರಿಗಳ ಹಾಜರಾತಿ: ವರದಿ ಸಲ್ಲಿಕೆಯ ವೇಳೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರುಗಳಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ. ಸಿ.ಎಂ. ಕುಂದಗೋಳ, ಡಾ. ಜಿ.ಎನ್. ಶ್ರೀಕಂಠಯ್ಯ, ಸದಸ್ಯ ಕಾರ್ಯದರ್ಶಿ ದಯಾನಂದ್, ಆಡಳಿತಾತ್ಮಕ ಕಾರ್ಯದರ್ಶಿ ಊರ್ಮಿಳಾ ಬಿ. ಹಾಗೂ ಆಯೋಗದ ವಿಶೇಷ ಸಲಹೆಗಾರರಾದ ಡಿ.ಎನ್. ನಾಯಕ್ ಸೇರಿದಂತೆ ಇತರೆ ತಜ್ಞರು ಸಭೆಯಲ್ಲಿದ್ದರು.
ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಈ ವರದಿ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನು ಹೇಗೆ ಅನುಷ್ಠಾನಕ್ಕೆ ತರಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ








