ಪುಣೆ: ಮೇ 2024ರಲ್ಲಿ ನಡೆದ ಭೀಕರ ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರು ಯುವ ಇಂಜಿನಿಯರ್ಗಳ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿರುವ ಅಪ್ರಾಪ್ತನ ತಂದೆ ವಿಶಾಲ್ ಅಗರ್ವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಈ ಬೆನ್ನಲ್ಲೇ, ಅಗರ್ವಾಲ್ ಕುಟುಂಬವು ಸಂಭ್ರಮಾಚರಣೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದೆ.
ಜಾಮೀನು ಪಡೆದ ಬಳಿಕ ಅಗರ್ವಾಲ್ ಕುಟುಂಬವು ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಸಂಭ್ರಮ ಆಚರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವಿಶಾಲ್ ಅಗರ್ವಾಲ್ ಅವರು ಹೂವಿನ ಹಾರ ಮತ್ತು ಕರೆನ್ಸಿ ನೋಟುಗಳ ಹಾರವನ್ನು ಧರಿಸಿರುವುದು ಕಂಡುಬಂದಿದೆ. ಹಿನ್ನೆಲೆಯಲ್ಲಿ ಬಾಲಿವುಡ್ನ ಜನಪ್ರಿಯ ಹಾಡುಗಳೊಂದಿಗೆ ಲೈವ್ ಬ್ಯಾಂಡ್ ಸಂಗೀತವಿತ್ತು. ಕುಟುಂಬದ ಸದಸ್ಯರು ನೃತ್ಯ ಮಾಡುತ್ತಿದ್ದರೆ, ವಿಶಾಲ್ ಅಗರ್ವಾಲ್ ಮತ್ತು ಅವರ ಪತ್ನಿಯರನ್ನು ಸಂಬಂಧಿಕರು ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಿದ್ದಾರೆ. ಅಪಘಾತದ ಸಮಯದಲ್ಲಿ ಕಾರು ಚಲಾಯಿಸಿದ್ದ ಎನ್ನಲಾದ ಅಪ್ರಾಪ್ತ ಮಗನೂ ಈ ಆಚರಣೆಯಲ್ಲಿ ಭಾಗಿಯಾಗಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೃತರ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಮಕ್ಕಳನ್ನು ಕಳೆದುಕೊಂಡು ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ, ಆದರೆ ಆರೋಪಿಗಳ ಕುಟುಂಬವು ಇಂತಹ ಸಂಭ್ರಮಾಚರಣೆ ನಡೆಸುವ ಮೂಲಕ ನಮಗೆ ಅವಮಾನ ಮಾಡುತ್ತಿದೆ,” ಎಂದು ಸಂತ್ರಸ್ತರ ಕುಟುಂಬದವರು ಆರೋಪಿಸಿದ್ದಾರೆ. ಕಾನೂನಿನ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ವಿಡಿಯೋ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಈ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದು, ಆರೋಪಿಗಳ ಕುಟುಂಬದ ಅಸಂವೇದನಾಶೀಲ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








