ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ ಎಂಬ ಸ್ಪೋಟಕ ಮಾಹಿತಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಬಿಚ್ಚಿಟ್ಟಿದ್ದಾರೆ. ಈ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ಹಾಗೂ ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ವಿ. ದೇಶಪಾಂಡೆ ಅವರು, ತಾವೇ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು, “ನಾನು ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಹೇಳಿರುವುದಾಗಿ ದೇಶಪಾಂಡೆ ಬಹಿರಂಗಪಡಿಸಿದ್ದಾರೆ.
“ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಅವರು ನಾಳೆಯೇ ರಾಜೀನಾಮೆ ಕೊಡುವುದಾಗಿ ಹೇಳಿದರು. ಆದರೆ, ನಾವು ಅವರಿಗೆ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದೇವೆ. ಆದಾಗ್ಯೂ, ನಾಳೆ ಅವರು ರಾಜೀನಾಮೆ ನೀಡಬಹುದು ಎಂಬ ಮುನ್ಸೂಚನೆ ನನಗೆ ಸಿಗುತ್ತಿದೆ” ಎಂದು ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮುಂದುವರಿದು ಮಾತನಾಡಿದ ಅವರು, ಶಾಸಕರೆಲ್ಲರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಬಯಸಿದ್ದಾರೆ ಮತ್ತು ಅದನ್ನೇ ಅವರಿಗೆ ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್‌ಗೆ ಈಗಾಗಲೇ ಮಾತು ಕೊಟ್ಟಿದ್ದು, ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂಬ ನಿಲುವಿಗೆ ಬಂದಿದ್ದಾರೆ. “ನಾನು ಹೈಕಮಾಂಡ್‌ಗೆ ಮಾತು ಕೊಟ್ಟಿದ್ದೇನೆ, ಅದನ್ನು ನಾನು ಗೌರವಿಸಲೇಬೇಕು” ಎಂದು ಸಿದ್ದರಾಮಯ್ಯ ಭೇಟಿಯ ವೇಳೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ತಾವು ಮುಖ್ಯಮಂತ್ರಿಗಳಿಗೆ ಯಾವುದೇ ವೈಯಕ್ತಿಕ ಸಲಹೆ ನೀಡಿಲ್ಲ, ಕೇವಲ ಸೌಜನ್ಯದ ಚರ್ಚೆ ನಡೆಸಿದ್ದಾಗಿ ದೇಶಪಾಂಡೆ ಸ್ಪಷ್ಟಪಡಿಸಿದರು. “ನೀವೇ ಸಿಎಂ ಆಗಿ ಮುಂದುವರಿದರೆ ರಾಜ್ಯಕ್ಕೆ ಒಳ್ಳೆಯದು ಎಂದು ನಾನು ಸಿದ್ದರಾಮಯ್ಯ ಅವರಿಗೆ ಹೇಳಿದೆ. ಆದರೆ ಅವರು ಹೈಕಮಾಂಡ್‌ಗೆ ಈಗಾಗಲೇ ‘ಕಮಿಟ್’ ಆಗಿರುವುದಾಗಿ ತಿಳಿಸಿ, ತಮ್ಮ ರಾಜೀನಾಮೆಯ ನಿರ್ಧಾರಕ್ಕೆ ಬದ್ಧರಾಗಿದ್ದಾರೆ” ಎಂದು ಆರ್. ವಿ. ದೇಶಪಾಂಡೆ ಅವರು ರಾಜಕೀಯ ವಲಯದ ಅತ್ಯಂತ ದೊಡ್ಡ ವಿದ್ಯಮಾನವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.








