ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿದೇಶಿ ರಾಯಭಾರಿಗಳನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ನಬಿನ್, ಪಕ್ಷದ ಸಿದ್ಧಾಂತ, ಆಡಳಿತ ಮಾದರಿ ಮತ್ತು ಐತಿಹಾಸಿಕ ಪಯಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ‘ನೋ ಬಿಜೆಪಿ’ (KNOW BJP) ಉಪಕ್ರಮದ ಭಾಗವಾಗಿ, 12 ದೇಶಗಳ ರಾಯಭಾರಿಗಳು ಮತ್ತು ಹಿರಿಯ ರಾಜತಾಂತ್ರಿಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಾಗತಿಕ ಸಮುದಾಯಕ್ಕೆ ಬಿಜೆಪಿ ಕುರಿತಾದ ಸಮಗ್ರ ಚಿತ್ರಣವನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ನಿತಿನ್ ನಬಿನ್, “ಬಿಜೆಪಿಯ ಪಯಣ ಕೇವಲ ರಾಜಕೀಯ ಪಕ್ಷದ ವಿಸ್ತರಣೆಯ ಕಥೆಯಲ್ಲ; ಇದು ರಾಷ್ಟ್ರೀಯತೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯನ್ನು ತಲುಪಿಸುವ ಬದ್ಧತೆಯ ಐತಿಹಾಸಿಕ ಪ್ರಯಾಣ,” ಎಂದು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ವೇಗವಾಗಿ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸ್ವಾವಲಂಬನೆಯ ಕಡೆಗೆ ಸಾಗುತ್ತಿದೆ ಎಂದು ಅವರು ವಿವರಿಸಿದರು. ಮಹಿಳಾ ಸಬಲೀಕರಣ, ಯುವಜನರಿಗೆ ಅವಕಾಶಗಳು ಮತ್ತು ಡಿಜಿಟಲ್ ಕ್ರಾಂತಿಯು ಪಕ್ಷದ ಆಡಳಿತದ ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಬಲ: ಕೇವಲ ಅಧಿಕಾರ ಗಳಿಸುವುದು ಬಿಜೆಪಿಯ ಗುರಿಯಲ್ಲ, ಬದಲಾಗಿ ರಾಷ್ಟ್ರ ಹಿತಾಸಕ್ತಿಯನ್ನು ಮಿಗಿಲಾಗಿ ಇಡುವುದು ಪಕ್ಷದ ಮೂಲ ಸಿದ್ಧಾಂತವಾಗಿದೆ ಎಂದು ನಬಿನ್ ಪುನರುಚ್ಚರಿಸಿದರು.
‘ನೋ ಬಿಜೆಪಿ’ ಉಪಕ್ರಮವನ್ನು 2023ರಲ್ಲಿ ಪಕ್ಷದ ಸಂಸ್ಥಾಪನಾ ದಿನದಂದು ಪ್ರಾರಂಭಿಸಲಾಯಿತು. ಅಂದಿನಿಂದಲೂ ಈ ವೇದಿಕೆಯ ಮೂಲಕ ಪ್ರಪಂಚದ ವಿವಿಧ ದೇಶಗಳ ರಾಜಕೀಯ ನಾಯಕರು ಮತ್ತು ರಾಜತಾಂತ್ರಿಕರಿಗೆ ಭಾರತದ ಅತಿದೊಡ್ಡ ರಾಜಕೀಯ ಸಂಘಟನೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂದಿನ ಸಭೆಯಲ್ಲಿ ಪಕ್ಷದ ವಿದೇಶಾಂಗ ವ್ಯವಹಾರಗಳ ವಿಭಾಗದ ಉಸ್ತುವಾರಿ ವಿಜಯ್ ಚೌತೈವಾಲೆ ಕೂಡ ಉಪಸ್ಥಿತರಿದ್ದರು.








